
ಬೆಂಗಳೂರು: ಒಕ್ಕಲಿಗ ಸಮುದಾಯದ ಉದ್ಯಮಿಗಳ ನಡುವೆ ಪರಸ್ಪರ ಸಂಪರ್ಕ ಸೇತುವೆ ಕಲ್ಪಿಸುವುದು, ನವೋದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು, ಉತ್ಪನ್ನಗಳಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ನಾಲ್ಕನೇ ಆವೃತ್ತಿಯ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ ಕಾರ್ಯಕ್ರಮ ಶುಕ್ರವಾರ ಸಂಭ್ರಮದಿಂದ ಆರಂಭಗೊಂಡಿತು.
ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಗಾಣದ ಎತ್ತುಗಳು, ಎತ್ತಿನ ಬಂಡಿ, ರಾಗಿ ಬೀಸುವುದು, ಜನಪದ ಹಾಡುಗಳು ಎಕ್ಸ್‌ಪೋಗೆ ಬಂದವರನ್ನು ಎದುರುಗೊಂಡವು. ಗೊಂಬೆ ಕುಣಿತಗಳು, ವಿವಿಧ ವಾದನಗಳು ಸಾಥ್ ನೀಡಿದವು.
200ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಪ್ರದರ್ಶನ ಮತ್ತು ಮಾರಾಟಗಳು ನಡೆದವು. ಸೀರೆ ಸಹಿತ ಬಟ್ಟೆಗಳು, ಕಾಸ್ಮೊಟಿಕ್ ಉತ್ಪನ್ನಗಳು, ಶ್ರೀಗಂಧದ ಉತ್ಪನ್ನಗಳು, ಆಭರಣಗಳು, ಪೇಂಟ್‌ಗಳು, ಪೀಠೋಪಕರಣಗಳು, ಉಪ್ಪಿನಕಾಯಿ, ವಿವಿಧ ಎಣ್ಣೆಗಳು, ಸಾವಯವ ತಿನಿಸುಗಳು, ರಾಜಮುಡಿ, ಸಿರಿಧಾನ್ಯಗಳು ಗಮನ ಸೆಳೆದವು.
ಸ್ಥಳದಲ್ಲಿಯೇ ಕಬ್ಬು ಬಳಸಿ ತಯಾರಿಸಿದ ಬಿಸಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿತ್ತು. ವಿವಿಧ ಶಾಲಾ ಕಾಲೇಜುಗಳು ತಮ್ಮ ಕ್ಯಾಂಪಸ್‌ನಲ್ಲಿ ಯಾವ ಕೋರ್ಸ್‌ಗಳು ಇವೆ ಎಂಬ ಮಾಹಿತಿ ನೀಡಿದವು. ಬ್ಯಾಂಕ್‌ಗಳು ಸಾಲ ಸೌಲಭ್ಯಗಳ ವಿವರ ನೀಡಿದವು. ವಿವಿಧ ಯಂತ್ರೋಪಕರಣಗಳು, ಮಸಾಜ್ ಯಂತ್ರಗಳ ಪ್ರದರ್ಶನ ನಡೆಯಿತು. ಕಟ್ಟಡ ನಿರ್ಮಿಸಲು ಸೂಕ್ತವೇ ಎಂದು ವೈಜ್ಞಾನಿಕವಾಗಿ ಕಂಡು ಹಿಡಿಯುವ ಭೂ ಸಮೀಕ್ಷೆಯ ವಿವರಗಳೂ ವೀಕ್ಷಕರಿಗೆ ನೀಡಲಾಯಿತು.
ಕೆ.ಎಚ್. ರಾಮಯ್ಯ ಹೆಬ್ಬಾಗಿಲಿನಲ್ಲಿ ಒಕ್ಕಲಿಗರ ಇತಿಹಾಸವನ್ನು ಕಟ್ಟಿಕೊಡಲಾಗಿತ್ತು. ಗಂಗರು, ನಾಡಪ್ರಭು ಕೆಂಪೇಗೌಡರ ಕಾಲದ ಇತಿಹಾಸ, ಕುವೆಂಪು, ನಿರ್ಮಲವಾಣಿ, ಒಕ್ಕಲಿಗರ ಪ್ರಾತಃಸ್ಮರಣೀಯರ ವಿವರಗಳನ್ನು ನೀಡಲಾಗಿತ್ತು.
ಬೆಸಗರಹಳ್ಳಿ ರಾಮಣ್ಣ ಹೆಬ್ಬಾಗಿಲಿನಲ್ಲಿ ವಿವಿಧ ದನಕರುಗಳು, ಎಮ್ಮೆ, ಎತ್ತುಗಳ ಪ್ರದರ್ಶನ ನಡೆಯಿತು. ತರಕಾರಿ ಸಂತೆ, ಕಬ್ಬಿನ ಹಾಲು ಸಹಿತ ವಿವಿಧ ಜ್ಯೂಸ್‌ಗಳಿದ್ದವು. ಫುಡ್‌ಕೋರ್ಟ್‌ನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ವ್ಯವಸ್ಥೆ ಮಾಡಲಾಗಿತ್ತು. ಬೇಕಾದುದನ್ನು ಖರೀದಿಸಿ ತಿನ್ನುವ ವ್ಯವಸ್ಥೆ ಇದಾಗಿತ್ತು.
ಎಫ್‌ಸಿ ಏಂಜಲ್ಸ್‌ನಿಂದ ಇಬ್ಬರಿಗೆ ನೆರವು
ಹೊಸದಾಗಿ ಉದ್ಯಮ ಮಾಡುವವರಿಗೆ ಮೂಲನಿಧಿ ಒದಗಿಸಲು ಫಸ್ಟ್ ಸರ್ಕಲ್ ಏಂಜಲ್ಸ್ ಎಂಬ ಯೋಜನೆ ಆರಂಭಿಸಲಾಗಿದೆ. ಈ ಬಾರಿ 7 ಅರ್ಜಿಗಳು ಬಂದಿದ್ದು ಅದರಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಮೂಲನಿಧಿ ₹ 50 ಲಕ್ಷ ಒದಗಿಸಲಾಗುವುದು ಎಂದು ಫಸ್ಟ್ ಸರ್ಕಲ್ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ ಮಾಹಿತಿ ನೀಡಿದರು. ಸಮುದಾಯದ ಜನರು ಕೃಷಿ ಶಿಕ್ಷಣ ಕ್ಷೇತ್ರ ಸಣ್ಣ ಉದ್ಯಮಗಳಲ್ಲಿಯೇ ತೊಡಗಿಸಿಕೊಂಡಿದ್ದು ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿರಲಿಲ್ಲ. ಇತ್ತೀಚೆಗೆ ದೊಡ್ಡ ಉದ್ಯಮ ಆರಂಭಿಸಲು ಮನಸ್ಸು ಮಾಡುತ್ತಿದ್ದಾರೆ. ಅವರಿಗೆ ಫಸ್ಟ್ ಸರ್ಕಲ್ ಸಂಪೂರ್ಣ ಬೆಂಬಲ ನೀಡುತ್ತಿದೆ. ಮಹಿಳೆಯರಿಗೆ ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ಫಸ್ಟ್ ಸರ್ಕಲ್ (ಎಫ್‌ಸಿ) ಆರಂಭಿಸಲಾಗಿದೆ ಎಂದರು. ಸಣ್ಣ ಮನಸ್ಸು ಇಟ್ಟುಕೊಂಡವರಿಂದ ದೊಡ್ಡ ಕೆಲಸ ಸಾಧ್ಯವಿಲ್ಲ. ಅದಕ್ಕಾಗಿ ಫಸ್ಟ್ ಸರ್ಕಲ್‌ಗೆ ದೊಡ್ಡ ವ್ಯಕ್ತಿತ್ವಗಳನ್ನು ಮಾತ್ರ ಸೇರಿಸಿಕೊಳ್ಳಬೇಕು. ಎಫ್‌ಸಿಗೆ ಸಾಂಸ್ಥಿಕ ರೂಪ ಕೊಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಹೇಳಿದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ‘ಒಕ್ಕಲಿಗ ಸಮುದಾಯ ಹಿಂದೆ ಸೀಮಿತ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿತ್ತು. ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಸಮುದಾಯದ ಯುವಜನರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸಲು ಫಸ್ಟ್ ಸರ್ಕಲ್ ಮುಂದಾಗಿರುವುದು ಶ್ಳಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕಲಿಗ ಸಮುದಾಯದವರು ಇವತ್ತಿಗೂ ಶೇ 90ರಷ್ಟು ಮಂದಿ ಕೃಷಿ ಕ್ಷೇತ್ರ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಬೇರೆಲ್ಲ ಉದ್ಯಮಗಳಿಗಿಂತ ಕೃಷಿ ಉದ್ಯಮವನ್ನು ಸುಲಭವಾಗಿ ಮಾಡಲು ಸಾಧ್ಯ. ಕೃಷಿ ಇಲಾಖೆಯಲ್ಲಿ₹ 3 ಕೋಟಿ ವರೆಗೆ ಸಬ್ಸಿಡಿ ನೀಡುವ ಯೋಜನೆಗಳಿದ್ದು ಅದನ್ನು ಬಳಸಿಕೊಂಡು ಕೃಷಿ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಇಂದು ಉದ್ಯಮಿ ಪ್ರತಿನಿಧಿಗಳ ಸಮಾವೇಶ
ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಮತ್ತು ಗಾಯತ್ರಿ ವೃಕ್ಷ ಸಭಾಂಗಣದಲ್ಲಿ ನಡೆಯುತ್ತಿರುವ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ ನಾಲ್ಕನೇ ಆವೃತ್ತಿಯ ಎರಡನೇ ದಿನವಾದ ಜ.10ರಂದು ಬೆಳಿಗ್ಗೆ 10ಕ್ಕೆ ಉದ್ಯಮಿ ಪ್ರತಿನಿಧಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅಧ್ಯಕ್ಷತೆ ವಹಿಸುವರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಉದ್ಘಾಟಿಸುವರು. ವಿವಿಧ ಜನಪ್ರತಿನಿಧಿಗಳು ಉದ್ಯಮಿಗಳು ಪಾಲ್ಗೊಳ್ಳುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.