ADVERTISEMENT

ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ‘ಎಸ್ಕೇಪ್‌ ಕಾರ್ತಿಕ್‌’ ಬಂಧನ

ತರಕಾರಿ ವಾಹನದಲ್ಲಿ ಅವಿತು ಜೈಲಿನಿಂದ ಪರಾರಿಯಾಗಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 17:54 IST
Last Updated 31 ಡಿಸೆಂಬರ್ 2021, 17:54 IST
ಆರೋಪಿಯಿಂದ ಜಪ್ತಿ ಮಾಡಿರುವ ಚಿನ್ನದ ಆಭರಣಗಳು 
ಆರೋಪಿಯಿಂದ ಜಪ್ತಿ ಮಾಡಿರುವ ಚಿನ್ನದ ಆಭರಣಗಳು    

ಬೆಂಗಳೂರು: ಮನೆಗಳಿಗೆ ನುಗ್ಗಿ ಕಳ್ಳತನ ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದ ಕಾರ್ತಿಕ್‌ ಕುಮಾರ್‌ ಯಾನೆ ಎಸ್ಕೇಪ್ ಕಾರ್ತಿಕ್‌ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹11.43 ಲಕ್ಷ ಮೌಲ್ಯದ 254 ಗ್ರಾಂ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು 2021ರ ಆ.2ರ ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಕೋವಿಡ್‌ ಲಸಿಕೆ ಹಾಕಿಸಲು ಹೋಗಿದ್ದರು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಅವರ ಮಗ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದ ಆರೋಪಿ, ಬೀರುವಿನಲ್ಲಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕಳ್ಳತನ ಮಾಡಿದ್ದನ್ನು ಆತ ಒಪ್ಪಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯು ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ಕೆ.ಪಿ.ಅಗ್ರಹಾರ ಠಾಣೆಯ ವ್ಯಾಪ್ತಿ ಸೇರಿದಂತೆ ನಗರದ ವಿವಿಧೆಡೆ 85ಕ್ಕೂ ಹೆಚ್ಚು ಕಡೆ ಕಳ್ಳತನ ನಡೆಸಿದ್ದ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಕಳವು ಮಾಡಿದ್ದ. ಹಗಲು ಹೊತ್ತಿನಲ್ಲೇ ಕನ್ನ ಹಾಕಿ ಕಳವು ಮಾಡಿದ್ದ ಎರಡು ಪ್ರಕರಣಗಳು ಹಾಗೂ ರಾತ್ರಿ ಕನ್ನ ಹಾಕಿದ್ದ ಒಂದು ಪ್ರಕರಣ ಹಾಗೂ ತಲಾ ಒಂದು ಮನೆಗಳವು ಹಾಗೂ ಸಾಮಾನ್ಯ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಆಭರಣಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ’ ಎಂದರು.

ADVERTISEMENT

‘ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ಆರೋಪಿ, ವಿದ್ಯುತ್ ದೀಪಗಳು ಉರಿಯದ ಹಾಗೂ ಗೇಟ್‌ಗೆ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ನಂತರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ. ಆಗಾಗ ವಾಸ ಸ್ಥಳ ಬದಲಿಸುತ್ತಿದ್ದ. ಹೀಗಾಗಿ ಆತನನ್ನು ಪತ್ತೆ ಹಚ್ಚುವುದೇ ಸವಾಲಾಗಿತ್ತು’ ಎಂದು ಹೇಳಿದರು.

‘ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ’

‘ಮನೆ ಕಳವು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ಜೈಲಿಗೆ ತರಕಾರಿ ಸರಬರಾಜು ಮಾಡುವ ವಾಹನದಲ್ಲಿ ಅಡಗಿ ಕುಳಿತು ಅಲ್ಲಿಂದ ಪರಾರಿಯಾಗಿದ್ದ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮೈಸೂರಿನಲ್ಲಿ ಮನೆ ಕಳವು ಮಾಡಿ ಪರಾರಿಯಾಗುವ ವೇಳೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ ಆತ, ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದ. ಜೈಲಿನಿಂದ ಬಿಡುಗಡೆಯಾದ ನಂತರವೂ ಕಳ್ಳತನ ಮಾಡುವುದನ್ನು ಮುಂದುವರಿಸಿದ್ದ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.