ADVERTISEMENT

ಅಬಕಾರಿ: ಅಧಿಕಾರಿಗಳ ನಿಯೋಜನೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 19:48 IST
Last Updated 19 ನವೆಂಬರ್ 2018, 19:48 IST

ಬೆಂಗಳೂರು: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಕಾರ್ಯಗಳಿಗೆ ವರ್ಗಾವಣೆಗೊಂಡಿದ್ದ ಅಬಕಾರಿ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರನ್ನು ಮರಳಿ ಅವರ ಹುದ್ದೆಗಳಿಗೆ ನಿಯೋಜಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಇದೇ 27ರವರೆಗೆ ಗಡುವು ನೀಡಿದೆ.

‘ಚುನಾವಣೆಯ ನಂತರವೂ ನಮ್ಮ ಹುದ್ದೆಗಳಿಗೆ ವಾಪಸು ಕಳುಹಿಸಿಲ್ಲ’ ಎಂದು ಎನ್.ಗೋಪಾಲಪ್ಪ ಸೇರಿದಂತೆ 100ಕ್ಕೂ ಹೆಚ್ಚು ಅಬಕಾರಿ ಇಲಾಖೆಯ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ವಿಭಾಗಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ‘ಚುನಾವಣೆ ಮುಗಿದು ಆರು ತಿಂಗಳು ಕಳೆದಿದ್ದರೂ ಅರ್ಜಿದಾರರನ್ನು ಅವರ ಮೊದಲಿನ ಹುದ್ದೆಗಳಿಗೆ ಏಕೆ ವಾಪಸು ಕಳುಹಿಸಿಲ್ಲ’ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ADVERTISEMENT

ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ‘ಅಬಕಾರಿ ಇಲಾಖೆಯಿಂದ ಬೇರೆಡೆಗೆ ವರ್ಗಾವಣೆಗೊಂಡಿರುವ ಅಧಿಕಾರಿಗಳ ಪೈಕಿ ಯಾರಾದರೂ ತಮ್ಮ ಹಿಂದಿನ ಹುದ್ದೆಗಳಿಗೆ ಹಿಂದಿರುಗಲು ಬಯಸಿ ಸರ್ಕಾರಕ್ಕೆ ಮನವಿ ಪತ್ರ ನೀಡಿದರೆ ಕೂಡಲೇ ಪರಿಗಣಿಸಲಾಗುವುದು’ ಎಂದು ತಿಳಿಸಿದರು.

ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ‘ಈ ಕುರಿತಂತೆ ಕೈಗೊಂಡ ಕ್ರಮಗಳ ಕುರಿತು ನ.27ರಂದು ಮಾಹಿತಿ ನೀಡಿ’ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

‘ಚುನಾವಣೆ ಪ್ರಕ್ರಿಯೆ ಮುಗಿದರೂ ನಮ್ಮನ್ನು ಅಬಕಾರಿ ಇಲಾಖೆಗೆ ವಾಪಸು ಕಳುಹಿಸಿಲ್ಲ’ ಎಂದು ಆಕ್ಷೇಪಿಸಿ ಅರ್ಜಿದಾರರು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಮೆಟ್ಟಿಲೇರಿದ್ದರು. ಇವರ ಅರ್ಜಿಗಳನ್ನು ಕೆಎಟಿ ವಜಾಗೊಳಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.