ADVERTISEMENT

ಜಡತ್ವ ತೊರೆದರೆ ಸರ್ಕಾರಿ ಸಂಸ್ಥೆಗಳಿಗೆ ಅಸ್ತಿತ್ವ: ಬಸವರಾಜ ಬೊಮ್ಮಾಯಿ

ಎಂಸಿಎ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 21:50 IST
Last Updated 4 ಜನವರಿ 2023, 21:50 IST
ನಗರದಲ್ಲಿ ಬುಧವಾರ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ (ಎಡದಿಂದ) ಸಿದ್ದಲಿಂಗಪ್ಪ ಬಿ.ಪೂಜಾರಿ, ಎಂ.ಎಸ್.ಕರಿಗೌಡ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮುರುಗೇಶ್ ಆರ್. ನಿರಾಣಿ ಇದ್ದರು - ಪ್ರಜಾವಾಣಿ ಚಿತ್ರ
ನಗರದಲ್ಲಿ ಬುಧವಾರ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ (ಎಡದಿಂದ) ಸಿದ್ದಲಿಂಗಪ್ಪ ಬಿ.ಪೂಜಾರಿ, ಎಂ.ಎಸ್.ಕರಿಗೌಡ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮುರುಗೇಶ್ ಆರ್. ನಿರಾಣಿ ಇದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಜಡತ್ವ ತೊರೆದು ಆಧುನಿಕ ಕಾಲಘಟ್ಟಕ್ಕೆ ತೆರೆದುಕೊಳ್ಳದೇ ಹೋದರೆ ಖಾಸಗಿ ಪೈಪೋಟಿ ಮಧ್ಯೆ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್‌ ಆ್ಯಂಡ್‌ ಅಡ್ವರ್ಟೈಸಿಂಗ್‌ ಸಂಸ್ಥೆಯ (ಎಂಸಿಎ) ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.

90ರ ದಶಕದಲ್ಲಿ ಆರಂಭವಾದ ಖಾಸಗೀಕರಣ, ಜಾಗತೀಕರಣ, ಆಧುನೀಕರಣಗಳ ಫಲವಾಗಿ ಖಾಸಗಿ ಸಂಸ್ಥೆಗಳು ಪ್ರಾಬಲ್ಯಕ್ಕೆ ಬಂದವು. ಅದುವರೆಗೂ ಪ್ರಬಲವಾಗಿದ್ದ ಸರ್ಕಾರಿ ಸಂಸ್ಥೆಗಳು ತೀವ್ರ ಪೈಪೋಟಿ ಎದುರಿಸಬೇಕಾಯಿತು. ಕ್ರಿಯಾಶೀಲತೆ, ದಕ್ಷತೆ ಮೈಗೂಡಿಸಿಕೊಂಡ ಸರ್ಕಾರಿ ಸಂಸ್ಥೆಗಳು ಮಾತ್ರ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ, ಅಸ್ತಿತ್ವ ಉಳಿಸಿಕೊಂಡವು. ಅಂಥ ಸಂಸ್ಥೆಗಳಲ್ಲಿ ಎಂಸಿಎ ಸಹ ಒಂದು. ಆಧುನಿಕ ಕಾಲಘಟ್ಟದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಬೇಕಿದೆ. ಇಲ್ಲದಿದ್ದರೆ ಹಿನ್ನಡೆ
ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ಸರ್ಕಾರಿ ಸಂಸ್ಥೆಗಳು ಉತ್ತಮವಾಗಿ ಕೆಲಸ ಮಾಡಬೇಕು. ಉತ್ತಮ ಕಾರ್ಯದಕ್ಷತೆಯ ಜತೆಗೆ, ಸಾರ್ವಜನಿಕರ ವಿಶ್ವಾಸವನ್ನೂ ಗಳಿಸಬೇಕು. ಜನರ ಅನಿಸಿಕೆಗಳಿಗೆ ಮನ್ನಣೆ ನೀಡಬೇಕು. ಹಾಗಾದಾಗ ಅವುಗಳ ಅಸ್ತಿತ್ವ ಭದ್ರವಾಗುವ ಜತೆಗೆ, ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ‘ಸರ್ಕಾರಿ ಸಂಸ್ಥೆಗಳು ಖಾಸಗಿ ಕೆಲಸಗಳನ್ನೂ ನಿರ್ವಹಿಸುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಲಾಭದಾಯಕವಾಗಿ ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ನೂತನ ಲಾಂಚನ, ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದ ಕೈಗಾರಿಕಾ ಸಚಿವ ಮುರುಗೇಶ್‌ ಆರ್. ನಿರಾಣಿ, ‘ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯ ಗಮನಾರ್ಹ ಸಾಧನೆ ಮಾಡಿದೆ. ಜಾಗತಿಕ ಹೂಡಿಕೆದಾರರ ಸಮಾವೇಶಗಳ ಫಲವಾಗಿ ಸಾಕಷ್ಟು ಬಂಡವಾಳ ಹರಿದು ಬರುತ್ತಿದೆ’ ಎಂದು ವಿವರ ನೀಡಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಶಾಸಕ ರಿಜ್ವಾನ್‌ ಅರ್ಷದ್‌, ಸಂಸ್ಥೆಯ ಅಧ್ಯಕ್ಷ ಎಂ.ಎಸ್‌.ಕರಿಗೌಡರ, ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗ ಬಿ.ಪೂಜಾರಿ, ನಿರ್ದೇಶಕ ವೀರೇಶ್‌ ಸಂಗಳದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.