ADVERTISEMENT

ಚಿನ್ನಾಭರಣ ದೋಚಿದ ‘ಫೇಸ್‌ಬುಕ್‌’ ಗೆಳೆಯ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 19:58 IST
Last Updated 29 ಏಪ್ರಿಲ್ 2019, 19:58 IST

ಬೆಂಗಳೂರು: ‘ಫೇಸ್‌ಬುಕ್‌’ನಲ್ಲಿ ಪರಿಚಯವಾಗಿದ್ದ ಯುವಕನೊಬ್ಬ, ರಮೇಶ್‌ ಎಂಬುವರ ಪ್ರಜ್ಞೆ ತಪ್ಪಿಸಿ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ. ಆ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಳ್ಳತನ ಸಂಬಂಧ ರಮೇಶ್ ದೂರು ನೀಡಿದ್ದಾರೆ. ಫೇಸ್‌ಬುಕ್‌ ಖಾತೆ ಮೂಲಕಯುವಕನ ವಿಳಾಸ ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಬನಶಂಕರಿ 3ನೇ ಹಂತದ ಭುವನೇಶ್ವರಿ ನಗರದ ನಿವಾಸಿ ರಮೇಶ್, ಖಾಸಗಿ ವಿಮೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ತಿಂಗಳ ಹಿಂದೆ ‘ಫೇಸ್‌ಬುಕ್‌’ ಮೂಲಕ ಅವರಿಗೆ ಯುವಕನೊಬ್ಬನ ಪರಿಚಯವಾಗಿತ್ತು. ಚಾಟಿಂಗ್ ಮಾಡುತ್ತಿದ್ದ ಯುವಕ, ‘ನಿಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡುತ್ತೇನೆ’ ಎಂದು ಹೇಳುತ್ತಿದ್ದ. ಅದನ್ನು ರಮೇಶ್ ನಂಬಿದ್ದರು.’

ADVERTISEMENT

‘ನನಗೆ ಮದುವೆ ನಿಗದಿಯಾಗಿದೆ. ಬಟ್ಟೆ ಖರೀದಿಸಬೇಕು. ನೀವು ಬನ್ನಿ’ ಎಂದಿದ್ದ ಯುವಕ, ರಮೇಶ್ ಅವರನ್ನು ಏಪ್ರಿಲ್ 20ರಂದು ಸಂಜೆ 7ರ ಸುಮಾರಿಗೆ ಕತ್ರಿಗುಪ್ಪೆ ಸಿಗ್ನಲ್ ಬಳಿ ಕರೆಸಿಕೊಂಡಿದ್ದ. ಪರಸ್ಪರ ಮಾತನಾಡಿದ್ದ ಅವರ ನಡುವೆ ಆತ್ಮಿಯತೆ ಬೆಳೆದಿತ್ತು. ಇಬ್ಬರೂ ಮಂದಾರ್‌ ಬಾರ್‌ಗೆ ಹೋಗಿ 4 ಬಿಯರ್ ಬಾಟಲಿ ಹಾಗೂ 2 ಬಿರಿಯಾನಿ ಖರೀದಿಸಿದ್ದರು.’

‘ಆರೋಪಿಯನ್ನು ರಮೇಶ್, ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯೇ ಇಬ್ಬರೂ ಮದ್ಯ ಕುಡಿದು ಮಲಗಿದ್ದರು. ಮರುದಿನ ಎಚ್ಚರವಾದಾಗ ಯುವಕ ಇರಲಿಲ್ಲ. ಅನುಮಾನಗೊಂಡ ರಮೇಶ್, ಮನೆಯಲ್ಲೆಲ್ಲ ಹುಡುಕಾಡಿದ್ದರು. ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಮೊಬೈಲ್ ಕಳುವಾಗಿದ್ದು ಗೊತ್ತಾಗಿತ್ತು’ ಎಂದರು.

‘ನನ್ನ ಗಮನಕ್ಕೆ ಬಾರದಂತೆ ಯುವಕ, ಬಿಯರ್ ಬಾಟಲಿಯಲ್ಲಿ ಮತ್ತು ಬರುವ ಔಷಧಿ ಹಾಕಿದ್ದ. ಅದನ್ನು ಕುಡಿಯುತ್ತಿದ್ದಂತೆ ನಾನು ಪ್ರಜ್ಞೆ ತಪ್ಪಿ ಮಲಗಿದ್ದೆ. ಅದೇ ವೇಳೆಯೇ ಯುವಕ, ಕೃತ್ಯ ಎಸಗಿ ಪರಾರಿಯಾಗಿದ್ದಾನೆಂದು ರಮೇಶ್‌ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಗುದದ್ವಾರದಲ್ಲಿ ಅಕ್ರಮ ಚಿನ್ನ ಸಾಗಣೆ

ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಆರೋಪದಡಿ ಮೂವರು ಪ್ರಯಾಣಿಕರನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು, ₹ 29.30 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.

ಶಾರುಕ್‌ ಜಾಹೀರ್ ಹುಸೇನ್, ಮೊಹಮ್ಮದ್ ಹರೋನ್ ಹಾಗೂ ಅನ್ಸರಿ ಮೊಹಮ್ಮದ್ ಇಬ್ರಾಹಿಂ ಬಂಧಿತರು.

‘ಪೇಸ್ಟ್‌ ರೂಪದಲ್ಲಿದ್ದ ಚಿನ್ನವನ್ನು ಟೇಪ್‌ನಿಂದ ಸುತ್ತಿದ್ದ ಆರೋಪಿಗಳು, ಅದನ್ನೇ ಗುದದ್ವಾರದಲ್ಲಿ ಇಟ್ಟುಕೊಂಡಿದ್ದರು. ನಿಲ್ದಾಣದಿಂದ ಹೊರಬರುತ್ತಿದ್ದ ಆರೋಪಿಗಳ ಬಳಿ ಚಿನ್ನವಿರುವ ಮಾಹಿತಿ ಲೋಹ ಶೋಧಕದಿಂದ ಗೊತ್ತಾಗಿತ್ತು’ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ವೈದ್ಯರ ಮೂಲಕ ಚಿನ್ನವನ್ನು ಹೊರಗೆ ತೆಗೆಯಲಾಗಿದೆ. ಆರೋಪಿಗಳು ಚಿನ್ನ ಎಲ್ಲಿಂದ ತಂದಿದ್ದರು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.