ADVERTISEMENT

ಫೇಸ್‌ಬುಕ್‌ನಲ್ಲಿ ಪರಿಚಯ: ಮನೆ ಕೆಲಸದ ಸೋಗಿನಲ್ಲಿ ಕಳ್ಳತನ, ಮೂವರ ಬಂಧನ

ಮುಂಬೈನಲ್ಲಿ ಸಿಕ್ಕಿಬಿದ್ದ ಆರೋಪಿಗಳು * ಕದ್ದ ಮೊಬೈಲ್ ಬಳಸುತ್ತಿದ್ದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 2:58 IST
Last Updated 12 ಜುಲೈ 2022, 2:58 IST
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು   

ಬೆಂಗಳೂರು: ಕೆಲಸಕ್ಕೆ ಸೇರಿದ್ದ ಮೂರೇ ದಿನದಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಮಹಿಳೆ ಸೇರಿ ಮೂವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಹಾದೇವಿ ಕಲಾಲ್ (26), ಬೈನ ಪ್ರಿಯಾಂಕಾ ಮೊಗ್ರೆ (29) ಹಾಗೂ ವನಿತಾ ಗಾಯಕವಾಡ್ (37) ಬಂಧಿತರು. ಇವರಿಂದ 250 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ. ಮೂವರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮನೆ ಕೆಲಸಗಾರರ ಸೋಗಿನಲ್ಲಿ ಆರೋಪಿಗಳು ಹಲವು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದರು. ಮುಂಬೈನಲ್ಲಿ ಕೃತ್ಯ ಎಸಗಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲಿಗೂ ಹೋಗಿ ಬಂದಿದ್ದರು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಉದ್ಯಮಿ ಅರವಿಂದ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ತಿಳಿಸಿದರು.

ADVERTISEMENT

ಫೇಸ್‌ಬುಕ್ ಮೂಲಕ ಪರಿಚಯ: ‘ಆರೋಪಿ ಮಹಾದೇವಿ, ಸುಬ್ಬಲಕ್ಷ್ಮಿ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದರು. ‘ಮನೆ ಕೆಲಸಕ್ಕೆ ಮಹಿಳೆಯರು ಲಭ್ಯರಿದ್ದಾರೆ’ ಎಂಬುದಾಗಿ ಫೇಸ್‌ಬುಕ್‌ ಗ್ರೂಪ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಅದನ್ನು ನೋಡಿದ್ದ ಅರವಿಂದ್, ಮಹಿಳೆಯನ್ನು ಸಂಪರ್ಕಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ತಮ್ಮದು ದಕ್ಷಿಣ ಕನ್ನಡ ಜಿಲ್ಲೆಯಂದು ಹೇಳಿದ್ದ ಮಹಾದೇವಿ, ಕೆಲ ವರ್ಷ ಮುಂಬೈನಲ್ಲಿ ಕೆಲಸ ಮಾಡಿರುವುದಾಗಿ ತಿಳಿಸಿದ್ದರು. ಅವರ ಮಾತು ನಂಬಿದ್ದ ಅರವಿಂದ ಕೆಲಸಕ್ಕೆ ನೇಮಿಸಿಕೊಂಡಿದ್ದರು’ ಎಂದೂ ತಿಳಿಸಿದರು.

ಮಾಲೀಕರು ಇಲ್ಲದಿದ್ದಾಗ ಕಳ್ಳತನ: ‘ಮೂರು ದಿನ ಮನೆಯಲ್ಲಿ ಕೆಲಸ ಮಾಡಿದ್ದ ಮಹಾದೇವಿ, ಚಿನ್ನಾಭರಣ, ನಗದು ಹಾಗೂ ಬೆಳ್ಳಿ ಸಾಮಗ್ರಿಗಳು ಎಲ್ಲೆಲ್ಲಿವೆ ಎಂಬುದನ್ನು ತಿಳಿದುಕೊಂಡಿದ್ದರು. ಮೇ 3ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಇನ್ನಿಬ್ಬರು ಆರೋಪಿಗಳನ್ನು ಕರೆಸಿಕೊಂಡಿದ್ದರು. ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕದ್ದುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

ಕದ್ದ ಮೊಬೈಲ್ ಬಳಕೆ: ‘ಕಳ್ಳತನ ಮಾಡುವ ಉದ್ದೇಶದಿಂದಲೇ ಆರೋಪಿಗಳು ನಗರಕ್ಕೆ ಬಂದಿದ್ದರು. ಮುಂಬೈನಲ್ಲಿ ಕದ್ದು ತಂದಿದ್ದ ಮೊಬೈಲ್‌ಗಳನ್ನು ಬಳಸುತ್ತಿದ್ದರು. ಕೃತ್ಯದ ನಂತರ ಮೊಬೈಲ್ ಜಾಡು ಹಿಡಿದು ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭಯ ಅವರಲ್ಲಿತ್ತು’ ಎಂದು ಪೊಲೀಸರು ತಿಳಿಸಿದರು.

‘ಅರವಿಂದ್ ಅವರಿಗೆ ಮಹಾದೇವಿ ನೀಡಿದ್ದ ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡಾಗ ಸುಳಿವು ಸಿಕ್ಕಿರಲಿಲ್ಲ. ಆದರೆ, ಆರೋಪಿಗಳು ಕೆಲದಿನ ನಗರದ ವಸತಿಗೃಹಗಳಲ್ಲಿ ಉಳಿದುಕೊಂಡಿದ್ದರು. ಅದೇ ಮಾಹಿತಿ ಆಧರಿಸಿ ತನಿಖೆ ಕೈಗೊಂಡಾಗ ಮೂವರು ಸಿಕ್ಕಿಬಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.