ADVERTISEMENT

‘ಭಾವನಾತ್ಮಕ ವಿಚಾರವಷ್ಟೇ, ಕೋಮು ಸಂಘರ್ಷವಲ್ಲ’

ಡಿ.ಜೆ ಹಳ್ಳಿ ಗಲಭೆ: ಸತ್ಯಶೋಧನಾ ವರದಿಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 18:54 IST
Last Updated 3 ಅಕ್ಟೋಬರ್ 2020, 18:54 IST
ಡಿ.ಜಿ.ಹಳ್ಳಿ ಗಲಭೆ (ಸಂಗ್ರಹ ಚಿತ್ರ)
ಡಿ.ಜಿ.ಹಳ್ಳಿ ಗಲಭೆ (ಸಂಗ್ರಹ ಚಿತ್ರ)   

ಬೆಂಗಳೂರು: ‘ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯ ಗಲಭೆಯನ್ನು ಧರ್ಮ ಮತ್ತು ಜಾತಿಗೆ ಹಬ್ಬಿಸಲು ಬಹಳಷ್ಟು ಪ್ರಯತ್ನಗಳು ನಡೆದವು. ಆದರೆ, ಘಟನೆಯನ್ನು ಭಾವನಾತ್ಮಕ ವಿಚಾರವಾಗಿ ನೋಡಬೇಕೆ ವಿನಾ, ಜನಾಂಗೀಯ ದ್ವೇಷ, ಧರ್ಮಗಳ ನಡುವಿನ ಸಂಘರ್ಷದಂತೆ ನೋಡಬಾರದು’ ಎಂದು ದಲಿತ ಸಂಘರ್ಷ ಸಮಿತಿಯ (ಭೀಮವಾದ) ಮೋಹನ್‌ ರಾಜ್‌ ಹೇಳಿದರು.

ಡಿ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದ ಸತ್ಯಶೋಧನಾ ವರದಿ ಕುರಿತು ಆಲ್‌ ಇಂಡಿಯಾ ಪೀಪಲ್ಸ್‌ ಫೋರಂ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಮುಸ್ಲಿಮರು ಮತ್ತು ದಲಿತರು ಸೇತುವೆಯಂತಿದ್ದಾರೆ. ಆದರೆ, ಇಂತಹ ಸೇತುವೆಯನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.

ಹಿರಿಯ ವಕೀಲ ಬಾನು ಮುಷ್ತಾಕ್, ‘ಸತ್ಯಶೋಧನಾ ವರದಿಯು ಪಕ್ಷಪಾತವಲ್ಲದ, ವಿಶ್ವಾಸಾರ್ಹವಾದ ವರದಿಯಾಗಿದೆ. ಇಡೀ ವ್ಯವಸ್ಥೆಯಲ್ಲಿ ಇಂತಹ ಪಕ್ಷಪಾತವಲ್ಲದ ಆಲೋಚನೆ, ನಡವಳಿಕೆ ಇದ್ದರೆ ದೊಂಬಿ, ಹಿಂಸಾಚಾರಗಳು ನಡೆಯುವುದಿಲ್ಲ’ ಎಂದರು.

ADVERTISEMENT

‘ಇಡೀ ಗಲಭೆಗೆ ಕಾರಣವಾಗಿದ್ದು ನವೀನ್. ಆದರೆ, ಅವನ ಬಗ್ಗೆ ಚರ್ಚೆ ಮಾಡದೆ, ಧರ್ಮ ಮತ್ತು ಜಾತಿಯ ವಿಚಾರಗಳನ್ನು ಮುಂದು ಮಾಡಲಾಯಿತು. ಮುಸ್ಲಿಂ ಧರ್ಮಗುರುಗಳು ಹಾಗೂ ಇಬ್ಬರು ಶಾಸಕರು ಮನವಿ ಮಾಡಿದರೂ ಮುಸ್ಲಿಂ ಯುವಕರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ’ ಎಂದರು.

‘ಮುಸ್ಲಿಮರಿಗೆ ಮತ್ತು ಆ ಸಮುದಾಯದ ಯುವಕರಿಗೆ ವ್ಯವಸ್ಥೆಯಲ್ಲಿ ನಂಬಿಕೆ ಕಡಿಮೆಯಾಗಿದೆ. ಅದನ್ನು ಸರಿ ಮಾಡುವ ಅವಶ್ಯಕತೆ ಇದೆ. ಸರಿ ಮಾಡಲಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತವೆ’ ಎಂದರು.

‘ಗಲಭೆ–ಸಂಘರ್ಷಗಳಾದಾಗ ದಮನಿತ ಸಮುದಾಯವನ್ನು ಗುರಿ ಮಾಡಲಾಗುತ್ತದೆ. ಅನ್ಯಾಯವನ್ನು ಪ್ರಶ್ನಿಸುವಾಗಲೂ ದಮನಿತರು ತಾಳ್ಮೆಯಿಂದ ಕೇಳಬೇಕು. ಇಲ್ಲದಿದ್ದರೆಅನ್ಯಾಯಕ್ಕೆ ಒಳಗಾದವರನ್ನೇ ಅಪರಾಧಿಗಳನ್ನಾಗಿ ಮಾಡುವ ಕೆಲಸ ನಡೆಯುತ್ತದೆ’ ಎಂದರು.

ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ಫೋರಮ್‌ನ ವಿನಯ್‌ ಶ್ರೀನಿವಾಸ್ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.