ADVERTISEMENT

ಹಾರಾಡುತ್ತಿವೆ ಬಣ್ಣ ಮಾಸಿದ ಬಾವುಟಗಳು

ಮಳೆಗಾಲದಲ್ಲಿ ನೆನೆದು, ಬೇಸಿಗೆಯಲ್ಲಿ ಧೂಳಿಗೆ ಸಿಲುಕಿ ಕದಡಿ ಹೋಗುತ್ತಿರುವ ಧ್ವಜದ ಮೂಲ ಬಣ್ಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 20:17 IST
Last Updated 26 ಜನವರಿ 2021, 20:17 IST
ಬಣ್ಣ ಮಾಸಿದ ಬಾವುಟ
ಬಣ್ಣ ಮಾಸಿದ ಬಾವುಟ   

ಹೆಸರಘಟ್ಟ: ದಾಸನಪುರ ಮತ್ತು ಹೆಸರಘಟ್ಟ ಹೋಬಳಿಯ ಸರ್ಕಾರಿ ಕಚೇರಿಗಳು ಬಣ್ಣ ಬಿಳುಚಿಕೊಂಡ ಬಾವುಟಗಳನ್ನು ಹಾರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿಗಳಲ್ಲಿ ಆಚರಿಸಲಾಗುತ್ತದೆ. ಆದರೆ ಅದಕ್ಕೆ ಬಳಸುವ ಬಾವುಟದಲ್ಲಿ ಮೂಲ ಬಣ್ಣವೇ ಇರುವುದಿಲ್ಲ. ಐದಾರು ವರ್ಷಗಳ ಕಾಲ ಒಂದೇ ಬಾವುಟವನ್ನು ಉಪಯೋಗಿಸುವುದರಿಂದ ಬಾವುಟದ ಬಣ್ಣ ಮಾಸುತ್ತದೆ. ಅದನ್ನೇ ಅಧಿಕಾರಿಗಳು ಬಳಸುತ್ತಿದ್ದು, ಈ ವ್ಯವಸ್ಥೆ ಬದಲಾಗಬೇಕು’ ಎನ್ನುತ್ತಾರೆ ಬಿಳಿಜಾಜಿ ಗ್ರಾಮದ ನಿವಾಸಿ ಗೋವಿಂದ ರಾಜು.

‘ಗ್ರಾಮ ಪಂಚಾಯಿತಿಯ ಕಚೇರಿಯ ಮೇಲೆ ನಿತ್ಯ ರಾಷ್ಟ್ರಧ್ವಜ ಹಾರಿಸಲು ಗೌರವ ಸಂಭಾವನೆಯನ್ನು ಸರ್ಕಾರ ನೀಡುತ್ತದೆ. ಅದರೆ ಪಂಚಾಯಿತಿ ತನ್ನ ವರಮಾನದಲ್ಲಿ ರಾಷ್ಟ್ರಧ್ವಜವನ್ನು ಖರೀದಿ ಮಾಡಬೇಕು. ಒಂದು ರಾಷ್ಟ್ರಧ್ವಜಕ್ಕೆ ₹300ರಿಂದ ₹ 500 ವೆಚ್ಚವಾಗಬಹುದು. ವರ್ಷದಲ್ಲಿ ಎರಡು ಬಾವುಟವನ್ನು ಖರೀದಿ ಮಾಡಿದರೆ ಪಂಚಾಯಿತಿಗಳಿಗೆ ಯಾವ ಹೊರೆಯು ಅಗುವುದಿಲ್ಲ. ಬರುವ ಸದಸ್ಯರು ತಮ್ಮ ವರಮಾನಗಳ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಇಂತಹ ಸೂಕ್ಷ್ಮ ಮತ್ತು ದೇಶದ ಘನತೆ ಕಾಪಾಡುವ ವಿಷಯದ ಬಗ್ಗೆ ಒಲವು ತೋರುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅನೇಕ ಸಂಘ ಸಂಸ್ಥೆಗಳು ತಮ್ಮ ನಾಮಫಲಕಗಳ ಮೇಲೆ ರಾಷ್ಟ್ರಧ್ವಜವನ್ನು ಕಟ್ಟಿರುತ್ತಾರೆ. ವರ್ಷಾನುಗಟ್ಟಲೇ ಧ್ವಜವು ಹಾರುತ್ತಲೇ ಇರುತ್ತದೆ. ಮಳೆಗಾಲದಲ್ಲಿ ನೆನೆದು ಬೇಸಿಗೆಯಲ್ಲಿ ಧೂಳಿಗೆ ಸಿಲುಕಿ ಧ್ವಜದ ಮೂಲ ಬಣ್ಣವು ಕದಡಿ ಹೋಗಿರುತ್ತದೆ. ಅಂತಹ ಬಾವುಟಗಳನ್ನು ಸಂಸ್ಥೆಗಳು ತೆಗೆದು ಹಾಕುವುದಿಲ್ಲ. ಹೀಗೆ ಬೀದಿ ಬೀದಿಗಳಲ್ಲಿ ಬಣ್ಣ ಮಾಸಿದ ಧ್ವಜಗಳು ಹಾರುತ್ತಲೇ ಇವೆ. ರಾಷ್ಟ್ರಧ್ವಜವನ್ನು ಹೀಗೆ ಬೇಕಾಬಿಟ್ಟಿ ಉಪಯೋಗಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ರತಿ ಗ್ರಾಮ ಪಂಚಾಯಿತಿಗಳು ವರ್ಷದಲ್ಲಿ ಎರಡು ಬಾವುಟಗಳನ್ನು ಖರೀದಿ ಮಾಡಲು ನಿಯಮ ರೂಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಕೆಂಪಾಪುರ ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.