ADVERTISEMENT

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ

ಎನ್‌.ಟಿ.ಐ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ, ಸಿಇಒ ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 21:58 IST
Last Updated 2 ಅಕ್ಟೋಬರ್ 2022, 21:58 IST
   

ಬೆಂಗಳೂರು: ಎನ್‌.ಟಿ.ಐ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಮಾರಿದ್ದ ಆರೋಪದಡಿ, ಸಂಘದ ನಿರ್ದೇಶಕ ಹಾಗೂ ಸಿಇಒ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಂಚನೆಗೆ ಸಂಬಂಧಪಟ್ಟಂತೆ ಸಂಘದ ಮಾಜಿ ನಿರ್ದೇಶಕ ಎ.ಪಿ. ನಾಣಯ್ಯ ಅವರು ದೂರು ನೀಡಿದ್ದರು. ನಿರ್ದೇಶಕರಾದ ಎಚ್‌.ಎಂ. ಶೃಗೇಶ್ವರ, ಕೆ.ಎನ್. ರಾಮಕೃಷ್ಣರೆಡ್ಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಚಂದ್ ರಾಥೋಡ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ, ರಾಮಕೃಷ್ಣ ಹಾಗೂ ಪ್ರತಾಪ್ ಅವರನ್ನು ಬಂಧಿಸಲಾಗಿದೆ. ಸದ್ಯ ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂಘದ ವತಿಯಿಂದ ಕೊಡಿಗೇಹಳ್ಳಿಯಲ್ಲಿ ಎನ್‌.ಟಿ.ಐ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ ಕೆಲ ನಿವೇಶನಗಳ ನಕ್ಷೆ ಮಂಜೂರಾತಿಗೆ ಬಿಡಿಎ ವತಿಯಿಂದ ಅನುಮೋದನೆ ಪಡೆಯಲಾಗಿದೆ. ಆದರೆ, ಅನುಮೋದನೆ ಪಡೆಯದ ನಕ್ಷೆಯಲ್ಲಿದ್ದ ನಿವೇಶನಗಳನ್ನೇ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಹಲವರಿಗೆ ಮಾರಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ’ ಎಂದೂ ತಿಳಿಸಿವೆ.

ADVERTISEMENT

‘ಬಂಧಿತ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಇದುವರೆಗೂ ಎಷ್ಟು ನಿವೇಶನಗಳನ್ನು ಮಾರಿದ್ದಾರೆ? ಯಾರಿಗೆಲ್ಲ ವಂಚನೆ ಮಾಡಿದ್ದಾರೆ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಪೊಲೀಸ್ ಮೂಲಗಳುಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.