ಬೆಂಗಳೂರು: ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಜನರನ್ನು ವಂಚಿಸಲಾಗುತ್ತಿದ್ದು, ಆ ಸಂಬಂಧ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಕಲಿ ಖಾತೆ ಬಗ್ಗೆ ಯಶವಂತರಾಯಗೌಡರ ಆಪ್ತ ಸಹಾಯಕ ಎಸ್.ಸಿ. ರುದ್ರೇಶ್ ದೂರು ನೀಡಿದ್ದಾರೆ. ಆ ನಕಲಿ ಖಾತೆಗಳನ್ನು ಈಗಾಗಲೇ ರದ್ದು ಮಾಡಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
‘ಯಶವಂತರಾಯ ಗೌಡ ಪಾಟೀಲ ಹೆಸರಿನಲ್ಲಿ ಶಾಸಕರು, ಫೇಸ್‌ಬುಕ್‌ನಲ್ಲಿ ಅಧಿಕೃತ ಖಾತೆ ಹೊಂದಿದ್ದಾರೆ. ಅದನ್ನು ಹೊರತುಪಡಿಸಿ ಯಾರೋ ವಂಚಕರು, ‘ವೈ.ವಿ. ಪಾಟೀಲ’, ‘ಯಶವಂತರಾಯಗೌಡ ಪಾಟೀಲ ಅಭಿಮಾನಿಗಳು, ಆಲೂರು’ ಸೇರಿದಂತೆ ಹಲವರು ನಕಲಿ ಖಾತೆಗಳನ್ನು ತೆರೆದಿದ್ದಾರೆ ಎಂದು ರುದ್ರೇಶ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಶಾಸಕರೇ ಹೇಳಿರುವಂತೆ ಸಂದೇಶವೊಂದನ್ನು ನಕಲಿ ಖಾತೆಗಳಲ್ಲಿ ಪ್ರಕಟಿಸಿರುವ ವಂಚಕರು, ‘ದಯವಿಟ್ಟು. ನನಗೆ ₹5,000 ಬೇಕು. ಅದನ್ನು ಕೊಟ್ಟರೆ, ಎರಡು ಪಟ್ಟು ಹಣವನ್ನು ವಾಪಸ್ ಕೊಡುವ ಭರವಸೆ ನೀಡುತ್ತೇನೆ’ ಎಂದು ಬರೆದಿದ್ದಾರೆ. ಶಾಸಕರ ಹೆಸರು ದುರುಪಯೋಗಪಡಿಸಿಕೊಂಡು ವಂಚಕರು, ಈ ಕೃತ್ಯ ಎಸಗಿದ್ದಾರೆ. ಶಾಸಕರ ಚಾರಿತ್ರ್ಯವಧೆ ಮಾಡಿ, ಅವರ ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು’ ಎಂದು ರುದ್ರೇಶ ಕೋರಿರುವುದಾಗಿ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.