ADVERTISEMENT

ಜಲಮಂಡಳಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ

ನಿವೃತ್ತ ನೌಕರನ ಮಗನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 19:39 IST
Last Updated 11 ಜುಲೈ 2022, 19:39 IST

ಬೆಂಗಳೂರು: ಜಲಮಂಡಳಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಅಭ್ಯರ್ಥಿಗಳಿಂದ ಹಣ ಪಡೆದು ನಕಲಿ ನೇಮಕಾತಿ ಆದೇಶ ನೀಡಿ ವಂಚಿಸಲಾಗಿದ್ದು, ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜಲಮಂಡಳಿ ಕಾರ್ಯದರ್ಶಿ ಆರ್. ವೀಣಾ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಕುಣಿಗಲ್‌ ತಾಲ್ಲೂಕಿನ ಪ್ರಕಾಶ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಲಕ್ಷಾಂತರ ರೂಪಾಯಿ ಪಡೆದಿದ್ದ ಆರೋಪಿ ಪ್ರಕಾಶ್ ವಂಚನೆ ಮಾಡಿರುವ ಬಗ್ಗೆ ಕೆಲ ಅಭ್ಯರ್ಥಿಗಳು ಜಲಮಂಡಳಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಆಂತರಿಕ ತನಿಖೆ ಕೈಗೊಂಡಿದ್ದ ಕಾರ್ಯದರ್ಶಿ, ಅದರ ವಿವರ ಸಮೇತವಾಗಿಯೇ ದೂರು ಕೊಟ್ಟಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದೂ ತಿಳಿಸಿವೆ.

ADVERTISEMENT

ನಿವೃತ್ತ ನೌಕರನ ಮಗ: ‘ಆರೋಪಿ ಪ್ರಕಾಶ್, ಜಲಮಂಡಳಿ ನಿವೃತ್ತ ನೌಕರನ ಮಗ. ಜಲಮಂಡಳಿಯಲ್ಲಿ ಕೆಲಸ ಖಾಲಿ ಇರುವುದಾಗಿ ಹೇಳಿ ಕೆಲ ಅಭ್ಯರ್ಥಿಗಳನ್ನು ಈತ ಸಂಪರ್ಕಿಸಿದ್ದ. ಹಣ ನೀಡಿದರೆ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ. ಆರೋಪಿ ಮಾತು ನಂಬಿದ್ದ ಅಭ್ಯರ್ಥಿಗಳು ಹಣ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಲಮಂಡಳಿಯ ಈ ಹಿಂದಿನ ಕಾರ್ಯದರ್ಶಿ ಮಹೇಶ್ ಅವರ ಸಹಿ ಹಾಗೂ ಲೆಟರ್‌ ಹೆಡ್‌ ನಕಲು ಮಾಡಿದ್ದ ಆರೋಪಿ, ನಕಲಿ ನೇಮಕಾತಿ ಆದೇಶ ಸಿದ್ಧಪಡಿಸಿದ್ದ. ಅದನ್ನೇ ಅಭ್ಯರ್ಥಿಗಳಿಗೆ ನೀಡಿದ್ದ. ಕೆಲಸಕ್ಕೆ ಸೇರಲು ಅಭ್ಯರ್ಥಿಗಳು, ಜಲಮಂಡಳಿಗೆ ಹೋದಾಗಲೇ ಆದೇಶಗಳು ನಕಲಿ ಎಂಬುದು ಗೊತ್ತಾಗಿತ್ತು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.