ಬೆಂಗಳೂರು: ಮಾರತ್‌ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ್ ಲೇಔಟ್‌ನಲ್ಲಿ ನೆಲಸಿದ್ದ ವ್ಯಕ್ತಿಯೊಬ್ಬರು, 26 ಪುಟಗಳ ಮರಣ ಪತ್ರವನ್ನು ಬರೆದಿಟ್ಟು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಅತುಲ್ ಸುಭಾಷ್(34) ಆತ್ಮಹತ್ಯೆ ಮಾಡಿಕೊಂಡವರು. ಕಂಪನಿಯೊಂದರಲ್ಲಿ ನಿರ್ದೇಶಕರಾಗಿ ಅವರು ಕೆಲಸ ಮಾಡುತ್ತಿದ್ದರು.
ಮರಣ ಪತ್ರವನ್ನೂ ಇ–ಮೇಲ್ ಮೂಲಕ ಸುಪ್ರೀಂ ಕೋರ್ಟ್, ಹೈಕೋರ್ಟ್, ತಮ್ಮ ಕಚೇರಿ, ಸರ್ಕಾರೇತರ ಸಂಸ್ಥೆ, ಕುಟುಂಬ ಸದಸ್ಯರಿಗೆ ಕಳುಹಿಸಿ ಭಾನುವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಅತುಲ್ ಸುಭಾಷ್ ಪತ್ನಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಅತುಲ್ ಅವರು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ಉತ್ತರ ಪ್ರದೇಶದಲ್ಲೇ ದಂಪತಿ ನೆಲಸಿದ್ದರು. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಇಬ್ಬರೂ ಬಂದಿದ್ದರು. ಮಂಜುನಾಥ್ ಲೇಔಟ್‌ನ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದರು. ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು, ಪತ್ನಿ ಉತ್ತರ ಪ್ರದೇಶಕ್ಕೆ ವಾಪಸ್ ತೆರಳಿದ್ದರು ಎಂದು ಮೂಲಗಳು ಹೇಳಿವೆ.
‘ಎನ್‌ಜಿಒ ಸೇರಿದಂತೆ ವಿವಿಧ ವಿಳಾಸಕ್ಕೆ ಮರಣ ಪತ್ರವನ್ನು ಇ–ಮೇಲ್ ಮಾಡಿ, ಸಾಧ್ಯವಾದರೆ ನನ್ನ ಕುಟುಂಬಕ್ಕೆ ಸಹಾಯ ಮಾಡುವಂತೆಯೂ ಅದರಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ನ್ಯಾಯ ಸಿಗುವುದು ಬಾಕಿಯಿದೆ ಎಂಬ ಪೋಸ್ಟರ್ ಅನ್ನು ಎದೆಯ ಮೇಲೆ ಅಂಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣಪತ್ರದಲ್ಲಿ ದಿನಚರಿಯನ್ನು ದಾಖಲಿಸಿದ್ದಾರೆ. ಕುಟುಂಬಸ್ಥರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ಅತುಲ್ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳ, ಹಲ್ಲೆಯ ದೂರು ದಾಖಲಿಸಿದ್ದರು. ವಿಚ್ಛೇಧನಕ್ಕೂ ಅರ್ಜಿ ಹಾಕಿ ₹1 ಕೋಟಿ ಪರಿಹಾರಕ್ಕೆ ಕೋರಿದ್ದರು. ಅತುಲ್ ಸಹ ಪ್ರತಿ ದೂರು ದಾಖಲಿಸಿದ್ದರು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.