ADVERTISEMENT

ಫ.ಗು. ಹಳಕಟ್ಟಿ ಅವರಿಗೆ ಮರಣೋತ್ತರವಾಗಿ ಬಸವಶ್ರೀ ಪ್ರಶಸ್ತಿ ನೀಡಬೇಕು: HK ಪಾಟೀಲ

ಫ.ಗು.ಹಳಕಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿದ ಸಚಿವ ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 22:44 IST
Last Updated 2 ಜುಲೈ 2025, 22:44 IST
ಕಾರ್ಯಕ್ರಮದಲ್ಲಿ ವೂಡೇ ಪಿ. ಕೃಷ್ಣ, ಚಂದ್ರಕಾಂತ ಬೆಲ್ಲದ, ಎಚ್.ಕೆ. ಪಾಟೀಲ, ಶಂಕರ ಬಿದರಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಸಿ. ಸೋಮಶೇಖರ್ ಅವರು ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವೂಡೇ ಪಿ. ಕೃಷ್ಣ, ಚಂದ್ರಕಾಂತ ಬೆಲ್ಲದ, ಎಚ್.ಕೆ. ಪಾಟೀಲ, ಶಂಕರ ಬಿದರಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಸಿ. ಸೋಮಶೇಖರ್ ಅವರು ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಚನ ಸಾಹಿತ್ಯದ ರಕ್ಷಣೆ, ವಚನಗಳ ಸಂಗ್ರಹ ಮತ್ತು ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಫ.ಗು. ಹಳಕಟ್ಟಿ ಅವರಿಗೆ ಮರಣೋತ್ತರವಾಗಿ ‘ಬಸವಶ್ರೀ ಪ್ರಶಸ್ತಿ’ ನೀಡಿ ಗೌರವಿಸಬೇಕು’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ಶಂಕರ ಬಿದರಿ ಫೌಂಡೇಷನ್ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ಫ.ಗು. ಹಳಕಟ್ಟಿ ಅವರು ವಚನ ಪಿತಾಮಹ ಎಂದೇ ಖ್ಯಾತರಾಗಿದ್ದಾರೆ. ಅವರು ಸ್ಥಾಪಿಸಿರುವ ಸಂಘ, ಸಂಸ್ಥೆಗಳು ಇಂದಿಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಪಡೆದಿವೆ. ಅವರ ಕಾರ್ಯಕ್ಷೇತ್ರ ವಿಸ್ತಾರವಾಗಿತ್ತು. ಅವರು ಯೋಜಿಸದ, ಸಾಧಿಸದ ಸಾರ್ವಜನಿಕ ಕ್ಷೇತ್ರವಿಲ್ಲ. ಹಸಿವಿನಿಂದ ಬಳಲುವ ಜನರಿಗೆ ನೆರವಾಗಲು ಬರನಿರೋಧಕ ಸಮಿತಿ ಸ್ಥಾಪಿಸಿದ್ದರು’ ಎಂದು ಸ್ಮರಿಸಿಕೊಂಡರು.

ADVERTISEMENT

‘ವಚನ ಸಾಹಿತ್ಯವನ್ನು ಶೋಧಿಸಿ, ಅನ್ವೇಷಿಸಿ ಪ್ರಕಟಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಇವರ ಕಾರ್ಯಗಳು ಹೆಚ್ಚು ಪ್ರಚಾರವಾಗಬೇಕು. ಮರಾಠಿ ಪ್ರದೇಶದೊಳಗೆ ಕನ್ನಡ ಶಾಲೆಗಳನ್ನು ಕಟ್ಟಿಸಿದ್ದನ್ನು ಮರೆಯುವಂತಿಲ್ಲ. ಹಳಕಟ್ಟಿ ಅವರ ಮೂಲ ಪುಸ್ತಕಗಳನ್ನು ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಸಂರಕ್ಷಿಸಲಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ಶಂಕರ ಬಿದರಿ ಫೌಂಡೇಷನ್ ಅಧ್ಯಕ್ಷ ಶಂಕರ ಬಿದರಿ, ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮಹಾಂತೇಶ ಬಿರಾದಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಸಿ.ಸೋಮಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.