ಬೆಂಗಳೂರು: ‘ಮಾರ್ಕ್ಸ್‌ವಾದಿ ಚಿಂತನೆಯ ನೆಲೆಯಲ್ಲೇ ಅರ್ಧ ಶತಮಾನದ ಕಾಲ ಕ್ಯೂಬಾವನ್ನು ಆಳಿದ ಫಿಡೆಲ್ ಕ್ಯಾಸ್ಟ್ರೊ ಜಗತ್ತಿನಾದ್ಯಂತ ಹಲವು ಹೋರಾಟಗಳಿಗೆ ಸ್ಫೂರ್ತಿಯಾದವರು. ಈಗಲೂ ಕ್ಯೂಬಾದ ಜನರಲ್ಲಿ ಆ ಹೋರಾಟದ ಮನೋಭಾವ ಕಾಣಬಹುದಾಗಿದ್ದು, ಕ್ರಾಂತಿಯ ಕಿಚ್ಚಿಗೆ ಕ್ಯೂಬಾ ಮಾದರಿ’ ಎಂದು ಈ ಹಿಂದೆ ಆ ದೇಶಕ್ಕೆ ಭೇಟಿ ನೀಡಿದ್ದ ವಿವಿಧ ಕ್ಷೇತ್ರಗಳ ಪ್ರಮುಖರು ಸ್ಮರಿಸಿಕೊಂಡರು.
ಫಿಡೆಲ್ ಕ್ಯಾಸ್ಟ್ರೊ ಶತಮಾನೋತ್ಸವ ವರ್ಷಾಚರಣೆ ಪ್ರಯುಕ್ತ ಕ್ಯೂಬಾ ಸೌಹಾರ್ದ ಸಮಿತಿ ಕರ್ನಾಟಕ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಪ್ರೀತಿಯ ಫಿಡೆಲ್...’ ಸಮಾರಂಭದ ಭಾಗವಾಗಿ ನಡೆದ ಸಂವಾದದಲ್ಲಿ, ಕವಯಿತ್ರಿ ಮಮತಾ ಸಾಗರ್, ವೈದ್ಯ ಡಾ. ಅನಿಲ್ ಕುಮಾರ್, ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಸ್ಪ್ಯಾನಿಶ್ ಸ್ಟಡೀಸ್‌ನ ನಿರ್ದೇಶಕ ರಂಜಿತ್ ಕುಮಾರ್ ಪಾಲ್ಗೊಂಡಿದ್ದರು. ಕ್ಯೂಬಾಗೆ ಭೇಟಿ ನೀಡಿದ್ದ ಅನುಭವವನ್ನು ಅವರು ಹಂಚಿಕೊಂಡರು. ಪತ್ರಕರ್ತ ಜಿ.ಎನ್. ಮೋಹನ್ ಅವರು ಸಂವಾದ ನಿರ್ವಹಿಸಿದರು.
‘ಅಮೆರಿಕವು ಕ್ಯೂಬಾದ ಮೇಲೆ ದಿಗ್ಬಂಧನ ಹೇರಿದ ಬಳಿಕ ಈ ದೇಶ ಸಂಕಷ್ಟಕ್ಕೆ ಸಿಲುಕಿತು. ಆದರೆ, ಕಠಿಣ ನಿಲುವುಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು. ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರದಲ್ಲಿ ಪ್ರಗತಿ ಹೊಂದಿದರೂ, ಉತ್ಪಾದನೆಯಂತಹ ಕ್ಷೇತ್ರದಲ್ಲಿ ಆ ದೇಶ ಹಿಂದೆ ಬಿದ್ದಿದೆ’ ಎಂದು ಸಂವಾದದಲ್ಲಿ ಪಾಲ್ಗೊಂಡವರು ಅಭಿಪ್ರಾಯಪಟ್ಟರು. ಇದೇ ವೇಳೆ ಕ್ಯೂಬಾದ ಜನರಿಗಾಗಿ ನಿಧಿಯನ್ನೂ ಸಂಗ್ರಹಿಸಲಾಯಿತು.
ಕ್ಯೂಬಾದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅನುಭವ ಹಂಚಿಕೊಂಡ ಮಮತಾ ಸಾಗರ್, ‘ಕ್ಯೂಬಾ ಚಿಕ್ಕ ಮೆಣಸಿನಕಾಯಿ ರೀತಿಯಿದ್ದು, ಹೆಚ್ಚು ಖಾರವಾಗಿದೆ. ಆ ದೇಶದ ಬಗ್ಗೆ ಆಲೋಚನೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.
ಡಾ.ಅನಿಲ್ ಕುಮಾರ್, ‘ಕ್ಯೂಬಾದಲ್ಲಿ ಸಣ್ಣ ಮಗುವಿನಿಂದ ವೃದ್ಧರವರೆಗೆ ಎಲ್ಲ ವಯೋಮಾನದವರು ಕ್ರಾಂತಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕೆಂಬ ಭಾವನೆ ಹೊಂದಿದ್ದಾರೆ. ಅಮೆರಿಕದಂತಹ ದೇಶವನ್ನು ಎದುರಿಸುವ ಧೈರ್ಯ ಅವರಲ್ಲಿದೆ. ಅಲ್ಲಿ 600 ಜನರಿಗೆ ಒಬ್ಬರಂತೆ ವೈದ್ಯರಿದ್ದಾರೆ. ಆದರೆ, ಅಲ್ಲಿಯ ಜನರಿಗೆ ಔಷಧ ತಯಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರು.
ಸಿದ್ದನಗೌಡ ಪಾಟೀಲ, ‘ಅಮೆರಿಕವು ದಿಗ್ಬಂಧನ ಹೇರಿದ್ದ ಸಂದರ್ಭದಲ್ಲಿ ನಾವು ಕ್ಯೂಬಾಕ್ಕೆ ಹೋಗಿದ್ದೇವು. ಆ ವೇಳೆ ಕಟ್ಟಡಗಳಿಗೆ ಬಣ್ಣ ಹಚ್ಚಲೂ ಸಾಧ್ಯವಾಗದ ಪರಿಸ್ಥಿತಿಯನ್ನು ಅವರು ಎದುರಿಸುತ್ತಿದ್ದರು. ಭಾರತ ಹಾಗೂ ಭಾರತೀಯರ ಮೇಲೆ ಅವರು ಪ್ರೀತಿ ಹೊಂದಿದ್ದಾರೆ’ ಎಂದು ಹೇಳಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್ ಕೆ. ಅವರು ಅನುವಾದಿಸಿರುವ ‘ಕ್ಯಾಸ್ಟ್ರೋ ಕತೆ’ ಹಾಗೂ ಜಿ.ಎನ್. ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ ಕೃತಿಯ ತಮಿಳು ಮತ್ತು ತೆಲಗು ಅನುವಾದಗಳು ಬಿಡುಗಡೆಯಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.