ಬೆಂಗಳೂರು: ಬೆಂಗಳೂರು ರಾಯಲ್ ಚಾಲೆಂಜರ್ಸ್(ಆರ್‌ಸಿಬಿ) ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀ ಹಿಂದುಳಿದ ಮಠಾಧೀಶರ ಮಹಾಸಭಾವು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೂರು ಸಲ್ಲಿಸಿದೆ. ಮಹಾದುರಂತದಿಂದ 11 ಮಂದಿ ಮೃತಪಟ್ಟು, 64 ಮಂದಿ ಗಾಯಗೊಂಡಿದ್ದರು.
ಮಹಾಸಭಾದ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ನೇತೃತ್ವದ ನಿಯೋಗವು ಇ.ಡಿ ನಿರ್ದೇಶಕರಿಗೆ ದೂರು ಸಲ್ಲಿಸಿತು.
‘ಮಹಾದುರಂತಕ್ಕೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕಾರಣವಾಗಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಆಗಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.
‘ಕ್ರಿಕೆಟ್ ಅನ್ನು ಆರ್‌ಸಿಬಿ ವಾಣಿಜ್ಯೋದ್ಯಮಕ್ಕಾಗಿ ಬಳಸಿಕೊಂಡಿದೆ. ಆರ್‌ಸಿಬಿ ಹಣಕಾಸು ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಕಾರ್ಯಕ್ರಮಕ್ಕೆಂದು ಹಣ ಸಂಗ್ರಹಿಸಿ ಬೇರೆ ಕಡೆ ಬಳಸಿದ್ದಾರೆ. ಅದರ ಬಗ್ಗೆಯೂ ವಿಚಾರಣೆ ನಡೆಸಬೇಕು. ಕೆಎಸ್ಸಿಎ ವಿರುದ್ಧವೂ ತನಿಖೆ ನಡೆಸಬೇಕು’ ಎಂದು ಸ್ವಾಮೀಜಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸಿಎಂ, ಡಿಸಿಎಂ ವಿರುದ್ಧವೂ ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ ಮತ್ತು ಆರ್‌ಸಿಬಿ ಆಡಳಿತ ಮಂಡಳಿ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೂ ದೂರು ಸಲ್ಲಿಸಲಾಗಿದೆ.
ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವನಾಗಿದೇವ ಸ್ವಾಮೀಜಿ, ಬಸವಮೂರ್ತಿ ಸ್ವಾಮೀಜಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.