ಬೆಂಗಳೂರು: ವಿದ್ಯಾರಣ್ಯಪುರ ಮುಖ್ಯರಸ್ತೆಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ 70 ರೌಡಿಗಳನ್ನು ಕಳುಹಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ ಡಿವಿಆರ್‌ಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದ ಆರೋಪದ ಅಡಿ ವಿದ್ಯಾರಣ್ಯಪುರದ ನ್ಯಾಷನಲ್ ಪಬ್ಲಿಕ್ ಶಾಲೆಯ ನಾಲ್ವರ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎನ್‌ಪಿಎಸ್ ಮಾಲೀಕರಾದ ಜಿ.ಧನಂಜಯ್, ನಿರ್ದೇಶಕರಾದ ಗಂಗಾಧರಯ್ಯ ಹಾಗೂ ರಾಧ ಧನಂಜಯ್, ನಂದೀಶ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೇ 29ರಂದು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲಾ ಆವರಣಕ್ಕೆ ಸುಮಾರು 70 ರೌಡಿಗಳು ನುಗ್ಗಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಫೋನ್ ಕಸಿದುಕೊಂಡು ಚಿನ್ನಾಭರಣ ಕಸಿದುಕೊಂಡಿದ್ದಾರೆ. ನಂತರ, ಮತ್ತೊಂದು ಗುಂಪು ಬಂದು ಡ್ರಗ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದೆ. ತರಗತಿ ಕೊಠಡಿಗೂ ನುಗ್ಗಿ ಕಂಪ್ಯೂಟರ್‌ಗಳನ್ನು ಧ್ವಂಸ ಮಾಡಲಾಗಿದೆ. ಬೆಂಚು ಮುರಿದು ಹಾಕಲಾಗಿದೆ. ಮೂಲ ದಾಖಲಾತಿಗಳನ್ನು ಹಾಳು ಮಾಡಿ ₹1.75 ಲಕ್ಷ ನಗದು ದೋಚಲಾಗಿದೆ. ವೆಲ್ಡಿಂಗ್ ಮಷಿನ್ ತಂದು ಶಾಲಾ ಗೇಟ್‌ಗೆ ಕಬ್ಬಿಣದ ರಾಡ್‌ನಿಂದ ವೆಲ್ಡ್ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಚಿಕ್ಕಲಿಂಗೇಶ್ ಅವರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.