ADVERTISEMENT

ನಿಂಬಾಳ್ಕರ್, ಹಿಲೋರಿ ವಿರುದ್ಧ ಎಫ್‌ಐಆರ್‌

‘ಐಎಂಎ’ ಬಹುಕೋಟಿ ವಂಚನೆ ಪ್ರಕರಣ * ಡಿವೈಎಸ್ಪಿ, ಇನ್‌ಸ್ಪೆಕ್ಟರ್‌, ಎಸ್‌ಐಯೂ ಆರೋಪಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 19:58 IST
Last Updated 4 ಫೆಬ್ರುವರಿ 2020, 19:58 IST
ಹೇಮಂತ್ ನಿಂಬಾಳ್ಕರ್
ಹೇಮಂತ್ ನಿಂಬಾಳ್ಕರ್   

ಬೆಂಗಳೂರು: ಐಎಂಎ (ಐ–ಮಾನಿಟರಿ ಅಡ್ವೈಸರಿ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಪರಾಧಿಕ ಒಳ ಸಂಚು ರೂಪಿಸಿ ಭ್ರಷ್ಟಾಚಾರ ಎಸಗಿದ ಆರೋಪದಡಿ ಐಪಿಎಸ್‌ ಅಧಿಕಾರಿಗಳಾದ ಹೇಮಂತ್‌ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.

ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಎಂ. ರಮೇಶ್, ಸಬ್‌ ಇನ್‌ಸ್ಪೆಕ್ಟರ್‌ ಗೌರಿಶಂಕರ್‌, ಸಿಐಡಿಯ ಡಿವೈಎಸ್ಪಿ ಇ.ಬಿ.ಶ್ರೀಧರ್‌, ಐಎಂಎ ಮಾಲೀಕ ಮೊಹ್ಮದ್‌ ಮನ್ಸೂರ್‌ ಖಾನ್‌, ವ್ಯವಸ್ಥಾಪಕ ನಿರ್ದೇಶಕ ನಿಜಾಮುದ್ದೀನ್, ನಿರ್ದೇಶಕರಾದ ವಸೀಂ, ಅರ್ಷದ್‌ ಖಾನ್‌ ಸೇರಿ 10 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಸಿಐಡಿ ಐಜಿಪಿ ಆಗಿದ್ದ ನಿಂಬಾಳ್ಕರ್‌ ಮತ್ತು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಹಿಲೋರಿ ಸೇರಿದಂತೆ ಉಳಿದೆಲ್ಲ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದ ಬಗ್ಗೆ ಸಿಬಿಐ ಅಧಿಕಾರಿಗಳು ಪುರಾವೆ ಸಂಗ್ರಹಿಸಿದ್ದರು. ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದರು.

ADVERTISEMENT

ರಾಜ್ಯ ಸರ್ಕಾರ ಅನುಮತಿ ನೀಡಿದ್ದರ ಬೆನ್ನಲ್ಲೇ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಅಕ್ರಮವಾಗಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿರುವ ಐಎಂಎ ಕಂಪನಿ ಮೇಲೆ ನಿಗಾ ವಹಿಸುವಂತೆ 2016 ಆ. 12ರಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿ–ಐಜಿಪಿ) ಆರ್‌ಬಿಐ ಸೂಚಿಸಿತ್ತು. ಡಿಜಿ–ಐಜಿಪಿ ನಿರ್ದೇಶನ ನೀಡಿದರೂ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಹಿಲೋರಿ ಹಾಗೂ ಇನ್‌ಸ್ಪೆಕ್ಟರ್‌ ರಮೇಶ್‌ ಸಮರ್ಪಕ ವಿಚಾರಣೆ ನಡೆಸದೆ ಪ್ರಕರಣ ಮುಕ್ತಾಯಗೊಳಿಸಿದ್ದರು.

‘ನಿಯಮ ಪ್ರಕಾರವೇ ಕಂಪನಿ ವ್ಯವಹರಿಸುತ್ತಿದೆ. ಯಾವುದೇ ಹೂಡಿಕೆದಾರರು ದೂರು ನೀಡದಿರುವುದರಿಂದ ‘ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ’ಯಡಿ (ಕೆಪಿಐಡಿ) ಕ್ರಮ ಜರುಗಿಸಲು ಸಾಧ್ಯವಿಲ್ಲ’ ಎಂದು ಆರೋಪಿಗಳು ವರದಿಯಲ್ಲಿ ಉಲ್ಲೇಖಿಸಿದ್ದರೆಂದು ಎಫ್‌ಐಆರ್‌ನಲ್ಲಿ ಸಿಬಿಐ ಅಧಿಕಾರಿಗಳು ನಮೂದಿಸಿದ್ದಾರೆ.

ವರದಿಯನ್ನು ತಿರಸ್ಕರಿಸಿದ್ದ ಆರ್‌ಬಿಐ, ಮರು ಪರಿಶೀಲಿಸುವಂತೆ ಡಿಸಿಪಿಗೆ ಮತ್ತೆ ಸೂಚಿಸಿತ್ತು. ಅದನ್ನು ಗಂಭೀರವಾಗಿ ಪರಿಗಣಿಸದ ಹಿಲೋರಿ, ತಾನು ವರ್ಗಾವಣೆಯಾಗುವ ಮೊದಲು ‘ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ’ ಎಂಬ ಹೇಳಿಕೆ ನೀಡಿ ಪ್ರಕರಣ ಮುಚ್ಚಿಹಾಕಿದ್ದರು.

ಈ ಮಧ್ಯೆ, ಐಎಂಎ ಕಂಪನಿ ವಿರುದ್ಧ ದೂರುಗಳು ಬಂದಿದ್ದರಿಂದ ಪೊಲೀಸ್‌ ತನಿಖೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದರು. ರಮೇಶ್‌, ಗೌರಿಶಂಕರ್‌ ಮತ್ತು ಹಿಲೋರಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಮೂವರು ಅಧಿಕಾರಿಗಳು ಒಳಸಂಚು ರೂಪಿಸಿ, ಐಎಂಎಗೆ ಲಾಭ ಮಾಡಿಕೊಟ್ಟಿರುವುದಾಗಿ ಸಿಬಿಐ ಹೇಳಿದೆ.

ಈ ವಂಚನೆ ಪ್ರಕರಣ ಸಂಬಂಧ ಕಂಪನಿಯ ನಿರ್ದೇಶಕರು, ಲೆಕ್ಕಪರಿಶೋಧಕರು, ಮಧ್ಯವರ್ತಿಗಳು ಸೇರಿ 22 ಮಂದಿ ವಿರುದ್ಧ ಸಿಬಿಐ ಈಗಾಗಲೇ ಎರಡು ದೋಷಾರೋಪ ಪಟ್ಟಿ ಸಲ್ಲಿಸಿದೆ.

‘ಐಎಂಎಗೆ ಅನುಕೂಲಕರ ವರದಿ’

ಐಎಂಎ ಕಂಪನಿಯ ವ್ಯವಹಾರಗಳನ್ನು ಕೆಪಿಐಡಿ ಕಾಯ್ದೆಯಡಿ ತನಿಖೆ ನಡೆಸುವಂತೆ 2018ರ ಜುಲೈ 4ರಂದು ಸಿಐಡಿ (ಆರ್ಥಿಕ ಅಪರಾಧಗಳ ವಿಭಾಗ) ಐಜಿಪಿಗೆ ಪೊಲೀಸ್‌ ಮಹಾ ನಿರ್ದೇಶಕರು ನಿರ್ದೇಶಿಸಿದ್ದರು. ಡಿವೈಎಸ್ಪಿ ಇ.ಬಿ. ಶ್ರೀಧರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಅವರು 2019ರ ಜ. 1ರಂದು ಕ್ಲೀನ್‌ ಚಿಟ್‌ ನೀಡಿದ್ದರು. ಅದರ ಆಧಾರದಲ್ಲಿ, 2019ರ ಜ. 18ರಂದು ವರದಿ ನೀಡಿದ್ದ ಹೇಮಂತ್‌ ನಿಂಬಾಳ್ಕರ್‌, ಐಎಂಎಗೆ ಅನುಕೂಲಕರವಾದ ವರದಿ ನೀಡಿದ್ದರು. ಈ ವರದಿಗಳಿಗೆ ಪ್ರತಿಯಾಗಿ ಲಂಚ ಪಡೆಯಲಾಗಿದೆ ಎಂಬ ಆರೋಪ ಅಧಿಕಾರಿಗಳ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.