ADVERTISEMENT

ಮಾಲೀಕ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 20:01 IST
Last Updated 13 ಫೆಬ್ರುವರಿ 2020, 20:01 IST

ಬೆಂಗಳೂರು: ಕೋರಮಂಗಲದಲ್ಲಿರುವ ಪಂಜಾಬಿ ಅನ್‌ಪ್ಲಗ್ಡ್ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ರೆಸ್ಟೋರೆಂಟ್ ಮಾಲೀಕ ರಮಣ್ ದೀಪ್ ಕೌರ್ ಮತ್ತು ಮೇಲ್ವಿಚಾರಕ ಕಿರಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೆ. 11ರಂದು ರಾತ್ರಿ 8 ಗಂಟೆಗೆ ಹೋಟೆಲ್‌ನಲ್ಲಿ ಬೆಂಕಿ ಅಗ್ನಿ ಅವಘಡ ಸಂಭವಿಸಿ ಬಾಣಸಿಗರು ಸೇರಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಪಂಕಜ್ ಅಧಿಕಾರಿ ಎಂಬವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಕೋರಮಂಗಲ ಠಾಣೆ ಪೊಲೀಸರು ತಿಳಿಸಿದರು.

ಈ ರೆಸ್ಟೋರೆಂಟ್‌ ಆನ್‌ಲೈನ್ ಮೂಲಕ ಗ್ರಾಹಕರಿಗೆ ಆಹಾರ ಸರಬರಾಜು ಮಾಡುತ್ತದೆ. ಮಂಗಳವಾರ ರಾತ್ರಿ ಬಾಣಸಿಗರು ಅಡುಗೆ ಮಾಡುವಾಗ ಗ್ಯಾಸ್ ಖಾಲಿಯಾಗಿತ್ತು. ಹೀಗಾಗಿ ಸಿಲಿಂಡರ್ ಬದಲಿಸಿದ್ದಾರೆ. ಕೆಲಸಮಯದ ಬಳಿಕ ಅನಿಲ ಸೋರಿಕೆಯಾಗಿದೆ. ರೊಟ್ಟಿ ತಯಾರಿಸುತ್ತಿದ್ದ ಒಲೆಯಿಂದ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ADVERTISEMENT

ರೆಸ್ಟೋರೆಂಟ್‌ನಲ್ಲಿ ತುರ್ತುನಿರ್ಗಮನಕ್ಕೆ ದಾರಿ ಇರಲಿಲ್ಲ. ಹೀಗಾಗಿ ಬಾಣಸಿಗರು ಒಳಗಡೆ ಸಿಲುಕಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರೂ ತ್ವರಿತಗತಿಯಲ್ಲಿ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ.

ರಮಣ್‌ದೀಪ್ ಕೌರ್ ಮತ್ತು ಉಸ್ತುವಾರಿ ಕಿರಣ್ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿದ್ದು, ಅವರಿಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.