ADVERTISEMENT

ಗುರು ರಾಘವೇಂದ್ರ ಸಹಕಾರ ಬ್ಯಾಂಕಿನಮಾಜಿ ಮುಖ್ಯ ಸಿಇಒ ವಿರುದ್ಧ ಎಫ್‌ಐಆರ್

ಅಧಿಕಾರ ದುರ್ಬಳಕೆ ಮಾಡಿ ಸಾಲ ವಿತರಿಸಿ ಕೋಟ್ಯಂತರ ಮೊತ್ತ ನಷ್ಟ ಆರೋಪ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:32 IST
Last Updated 10 ಫೆಬ್ರುವರಿ 2020, 20:32 IST

ಬೆಂಗಳೂರು: ‘ಮಣೂರು ವಾಸುದೇವ ಮಯ್ಯ ಅವರು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಗಿದ್ದ ಅವಧಿಯಲ್ಲಿ ಭದ್ರತೆಗಳಿಲ್ಲದೆ ಅತಿ ಹೆಚ್ಚು ಸಾಲ ನೀಡಿ ಕೋಟ್ಯಂತರ ಮೊತ್ತದ ನಷ್ಟ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ಬಸವನಗುಡಿಯ ನೆಟ್ಕಲಪ್ಪ ವೃತ್ತದ ಬಳಿಯಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಂತೋಷ್ ಅವರು ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

2012ರಿಂದ 2018ರ ಅವಧಿಯಲ್ಲಿ ವಾಸುದೇವ ಮಯ್ಯ ಬ್ಯಾಂಕಿನ ಸಂಪೂರ್ಣ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಅವರು ಬ್ಯಾಂಕಿನ ಗ್ರಾಹಕರ ಠೇವಣಿಗಳ ಮೇಲೆ ಮತ್ತು ಸಾಲಗಳನ್ನು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವಿತರಿಸಿರುವುದು 2019 ಅ. 14ರಂದು ನಡೆದ ಆರ್‍ಬಿಐ ಪರಿಶೀಲನೆ ವೇಳೆ ಗೊತ್ತಾಗಿದೆ.

‘ಬ್ಯಾಂಕಿಗೆ ನಷ್ಟ ಉಂಟು ಮಾಡುವ ಉದ್ದೇಶದಿಂದ ಗ್ರಾಹಕರಾದ ಜಸ್ವಂತ್ ರೆಡ್ಡಿ, ರಂಜಿತ ರೆಡ್ಡಿ, ಅಶೋಕ್ ರೆಡ್ಡಿ, ಮಿಸಸ್ ಮೆಗಾ ಟೆಕ್ ಕಂಪನಿಯ ಮುಖ್ಯಸ್ಥರು ಮತ್ತು ನವೀನ್ ಮತ್ತಿತರರ ಜೊತೆ ಸೇರಿ ಸಂಚು ನಡೆಸಿ ನಂಬಿಕೆ ದ್ರೋಹ ಎಸಗಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಸಂತೋಷ್ ಉಲ್ಲೇಖಿಸಿದ್ದಾರೆ.

ADVERTISEMENT

‘ದೂರಿಗೆ ಸಂಬಂಧಿಸಿದಂತೆ ಸಂತೋಷ್ ಅವರು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಿದೆ. ದಾಖಲೆ ಪರಿಶೀಲಿಸಿದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುವುದು. ದೂರಿನಲ್ಲಿ ಹೆಸರಿರುವ ಬಹುತೇಕ ಗ್ರಾಹಕರು ಬಾಣಸವಾಡಿಯಲ್ಲಿ ನೆಲೆಸಿರುವುದರಿಂದ ಸಂತೋಷ್ ಅವರು ಅಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಾಥಮಿಕ ಹಂತದ ತನಿಖೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.