ಬೆಂಗಳೂರು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರೊಂದಿಗೆ ಅನುಚಿತವಾಗಿ ವರ್ತಿಸಿ, ನಿಂದಿಸಿ ಹಾಗೂ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸೇರಿ ಏಳು ಜನರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಾನಂದ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಲೆಮಾರಿ ಮುಖಂಡರ ಸಭೆಯಲ್ಲಿ ಈ ಘಟನೆ ನಡೆದಿದೆ.
ಅಖಿಲ ಕರ್ನಾಟಕ ಕುಳುವ ಸಂಘದ ನಗರ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಪ್ರಭಾವತಿ ಅವರ ದೂರು ಆಧರಿಸಿ, ಬಿಜೆಪಿ ಮುಖಂಡ ಲೋಹಿತಾಕ್ಷ, ವಿರೇಶ್, ಶಿವು, ಬಸವರಾಜ, ಸುಭಾಷ್ ಚವ್ಹಾಣ್, ಜಾವಡೆ ಲೋಕೇಶ್, ಶಾಂತಕುಮಾರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಲೆಮಾರಿ ಸಮುದಾಯಗಳ ಸಭೆಯಲ್ಲಿ ನಿಗಮದ ಅಧ್ಯಕ್ಷೆ ಪಲ್ಲವಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು. ಅಲೆಮಾರಿ ಸಮುದಾಯಗಳ ಪರವಾಗಿ ಪಲ್ಲವಿ ಅವರು ಮಾತನಾಡಲು ಪ್ರಾರಂಭಿಸಿದ ವೇಳೆ, ಆರೋಪಿಗಳು ಅಡ್ಡಿಪಡಿಸಿ ಕೂಗಾಡಿದರು. ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿ, ಸಭೆಯಿಂದ ಹೊರ ಹೋಗುವಂತೆ ಹೇಳಿದರು. ಅಧ್ಯಕ್ಷರ ಕೈ ಹಿಡಿದು ಎಳೆದಾಡಿದರು. ಆರೋಪಿಗಳ ಪೈಕಿ ಒಬ್ಬ ನಮ್ಮ ಸೀರೆಯನ್ನು ಎಳೆದು, ಬೆದರಿಕೆ ಹಾಕಿದ್ದಾನೆ. ಅಲ್ಲದೇ ಎಡಗೈಯನ್ನು ತಿರುಚಿ ಗಾಯಗೊಳಿಸಿದ್ದಾನೆ. ಅಧ್ಯಕ್ಷರ ರಕ್ಷಣೆಗೆ ನಿಂತ ಇತರ ಮಹಿಳೆಯರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಈ ಘಟನೆ ಮಾಜಿ ಸಚಿವ ಎಚ್. ಆಂಜನೇಯ ಅವರ ಸಮ್ಮುಖದಲ್ಲಿ ನಡೆದಿದೆ. ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ದೂರು ಆಧರಿಸಿ ಬಿಎನ್‌ಎಸ್ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.