ಬೆಂಗಳೂರು: ಕಾಳಿಯಮ್ಮ ದೇವಸ್ಥಾನದ ಬೀದಿ ಬದಿ ಅಂಗಡಿ ಸೇರಿದಂತೆ ಹತ್ತಾರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ಸುತ್ತಮುತ್ತಲಿನ ನಿವಾಸಿಗಳಾದ ಮಕ್ಸೂದ್ ಅಹಮದ್, ಇಜಾರ್ ಪಾಷಾ ಹಾಗೂ ಹಮಿತ್ ತಬ್ರೇಜ್ ಬಂಧಿತರು.
ಜುಲೈ 28ರ ಬೆಳಗಿನ ಜಾವ ಕುಡಿದ ಅಮಲಿನಲ್ಲಿ ಆರೋಪಿಗಳು, ಉದ್ದೇಶಪೂರ್ವಕವಾಗಿ 10 ದ್ವಿಚಕ್ರ ವಾಹನಗಳು, 7 ಸೈಕಲ್ ಹಾಗೂ ಅಂಗಡಿಗೆ ಬೆಂಕಿ ಹಚ್ಚಿದ್ದರು. ವಾಹನಗಳು ಸುಟ್ಟುಹೋಗಿದ್ದವು. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಆರೋಪಿಗಳ ಪೈಕಿ ಮಕ್ಸೂದ್ ಅಹಮದ್, ಈ ಹಿಂದೆ ಹಲಸೂರಿನ ಬಜಾರ್ ಸ್ಟ್ರೀಟ್ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಡಿ.ಜೆ. ಹಳ್ಳಿಗೆ ಮನೆ ಬದಲಿಸಿದ್ದ. ಹಲಸೂರಿನಲ್ಲಿ ವಾಸವಿರುವಾಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಫಹಾದ್ ಹಾಗೂ ಸರ್ಪುದ್ದೀನ್ ಎಂಬುವರು ಕ್ಷುಲ್ಲಕ ಕಾರಣಕ್ಕಾಗಿ ಆರೋಪಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದರು.
ಅವಮಾನಕ್ಕೆ ಒಳಗಾಗಿದ್ದ ಮಕ್ಸೂದ್, ದ್ವೇಷ ಸಾಧಿಸುತ್ತಿದ್ದ. ಹಲಸೂರಿನಲ್ಲಿ ತಮ್ಮದೇ ಪ್ರಭಾವವಿರುವುದಾಗಿ ಸಂದೇಶ ಸಾರುವ ಸಲುವಾಗಿ ಮತ್ತಿಬ್ಬರನ್ನು ಒಗ್ಗೂಡಿಸಿ ಈ ರೀತಿಯ ದುಷ್ಕೃತವೆಸಗಿದ್ದಾನೆ. ಮೂವರು ಆರೋಪಿಗಳ ಮೇಲೆ ರೌಡಿಶೀಟ್ ತೆರೆಯಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.