ಬೆಂಗಳೂರು: ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣಪಾಳ್ಯದಲ್ಲಿ ಶನಿವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಕಾರ್ಮಿಕರ 40 ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ.
ರಸ್ತೆ ಬದಿ ಪ್ಲಾಸ್ಟಿಕ್ ವಸ್ತು ಮಾರಾಟ ಮಾಡುವವರು ಹಾಗೂ ಆಟಿಕೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ನಿರ್ಮಿಸಿದ್ದ 40 ಶೆಡ್‌ಗಳು ಸಂಪೂರ್ಣವಾಗಿ ಕರಕಲಾಗಿವೆ. ಆಹಾರ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿವೆ. ಪ್ರಾಣಹಾನಿ ಸಂಭವಿಸಿಲ್ಲ, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.
ವೀರಣ್ಣಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿ 50 ಶೆಡ್‌ಗಳನ್ನು ನಿರ್ಮಿಸಲಾಗಿದೆ. ಮೊದಲಿಗೆ ಒಂದು ಶೆಡ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ನೋಡ ನೋಡುತ್ತಿದ್ದಂತೆ ಇತರೆ ಶೆಡ್‌ಗಳಿಗೂ ಹಬ್ಬಿದೆ. ಟೆಂಟ್ ಒಳಗಿದ್ದವರು ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.
ಶೆಡ್‌ನಲ್ಲಿ ಬಹುತೇಕ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ವಾಸವಿದ್ದು, ಅವಘಡದಿಂದ ಕಂಗಾಲಾಗಿದ್ದಾರೆ. ಹಲವು ವರ್ಷಗಳಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಸಣ್ಣ ಶೆಡ್‌ಗಳಲ್ಲಿ 100ಕ್ಕೂ ಹೆಚ್ಚು ಜನರು ವಾಸವಾಗಿದ್ದರು. ರಾತ್ರಿಯಿಡೀ ಅವರು ಸ್ಥಳೀಯ ದೇಗುಲದ ಅಂಗಳದಲ್ಲಿ ವಿಶ್ರಾಂತಿ ಪಡೆದಿದ್ದಾರೆ.
ಜಾಗದ ಗುತ್ತಿಗೆ ಪಡೆದಿದ್ದ ಪಿಳ್ಳಪ್ಪ ಎಂಬುವರು ಸ್ಥಳಕ್ಕೆ ಭೇಟಿ ನೀಡಿ, ಶೆಡ್‌ಗಳನ್ನು ಖಾಲಿ ಮಾಡಲು ಸೂಚಿಸಿದ್ದರಿಂದ ಕಾರ್ಮಿಕರ ಆತಂಕಗೊಂಡಿದ್ದಾರೆ.
‘ಇದ್ದಕ್ಕಿದ್ದಂತೆ ಹೋಗಿ ಅಂದರೆ ಎಲ್ಲಿಗೆ ಹೋಗೋದು. ಮನೆಯಲ್ಲಿದ್ದ ಅಲ್ಪಸ್ವಲ್ಪ ಹಣ, ಸಾಮಗ್ರಿ ಬೆಂಕಿಗಾಹುತಿ ಆಗಿದೆ. ಸರ್ಕಾರ ಸಹಾಯ ಮಾಡಬೇಕು’ ಎಂದು ಕಾರ್ಮಿಕರು ಕಣ್ಣೀರು ಹಾಕಿದರು.
‘ಅಗ್ನಿ ಅವಘಡ ಕಾರಣ ತನಿಖೆ‘
‘ರಸ್ತೆ ಬದಿ ಪ್ಲಾಸ್ಟಿಕ್ ವ್ಯಾಪಾರಿಗಳು ಹಾಗೂ ಆಟಿಕೆ ತಯಾರಿಕೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಕರ್ನಾಟಕದ ರಾಯಚೂರು ವಿಜಯಪುರ ಗದಗ ಬಾಗಲಕೋಟೆಯ ಕಾರ್ಮಿಕರು ತಗಡಿನ ಹೊದಿಕೆಯ ಶೆಡ್‌ನಲ್ಲಿ ಬಾಡಿಗೆಗೆ ವಾಸವಿದ್ದರು. ತಡರಾತ್ರಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ. 40 ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸೊಕೊ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಗೋವಿಂದಪುರ ಠಾಣೆಯ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.