ADVERTISEMENT

ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 17:06 IST
Last Updated 2 ಜೂನ್ 2022, 17:06 IST

ಬೆಂಗಳೂರು: ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ವ್ಯಾಪ್ತಿಯ ‘ರಫೀ ಲೈಫ್ ಕೇರ್’ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಸಲ್ಮಾನ್ ಶರೀಫ್, ಸೈಯದ್ ಹುಸೇನ್, ನವಾಜ್, ಸೈಯದ್ ಹಾಗೂ ಮುಜಾಯಿದ್ದೀನ್ ಬಂಧಿತರು. ಆಸ್ಪತ್ರೆ ವೈದ್ಯ ಡಾ. ಅಬ್ದುಲ್ ಅಜೀಜ್ ನೀಡಿದ್ದ ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಸಲ್ಮಾನ್ ಶರೀಫ್, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ತಂದೆ ಅಸ್ಗರ್ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಮೇ 18ರಂದು ದಾಖಲಿಸಿದ್ದರು. 12 ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಿದ್ದ ವೈದ್ಯರು, ₹ 2.09 ಲಕ್ಷ ಬಿಲ್ ಮಾಡಿದ್ದರು. ₹ 41 ಸಾವಿರ ಮಾತ್ರ ಪಾವತಿಸಿದ್ದ ಸಲ್ಮಾನ್, ಉಳಿದ ಹಣ ಪಾವತಿಸಲು ನಿರಾಕರಿಸಿದ್ದರು. ಪೂರ್ತಿ ಬಿಲ್ ಪಾವತಿಸಿದ ಬಳಿಕವೇ ರೋಗಿಯನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸುವುದಾಗಿ ಸಿಬ್ಬಂದಿ ಹೇಳಿದ್ದರು. ಬಿಲ್ ವಿಚಾರವಾಗಿ ಜಗಳವೂ ನಡೆದಿತ್ತು.’

ADVERTISEMENT

‘ಮೇ 30ರಂದು ಆಸ್ಪತ್ರೆಗೆ ಅಕ್ರಮವಾಗಿ ನುಗ್ಗಿದ್ದ ಸಲ್ಮಾನ್ ಹಾಗೂ ಇತರರು, ಬಿಲ್ ಪಾವತಿಸದೇ ಅಸ್ಗರ್‌ ಅವರನ್ನು ಕರೆದೊಯ್ದಿದ್ದರು. ತಡೆಯಲು ಬಂದ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದರೆಂದು ಗೊತ್ತಾಗಿದೆ’ ಎಂದೂ ಪೊಲೀಸರು ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.