ADVERTISEMENT

ಕನಿಷ್ಠ ವೇತನ ಕಡಿಮೆ ಮಾಡಲು ಎಫ್‌ಕೆಸಿಸಿಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 16:30 IST
Last Updated 12 ಜನವರಿ 2021, 16:30 IST

ಬೆಂಗಳೂರು: ‘ಕೋವಿಡ್ ಕಾರಣದಿಂದ ಆಗಿರುವ ಆರ್ಥಿಕ ಹಿಂಜರಿತದಿಂದ ಕೈಗಾರಿಕೆಗಳನ್ನು ಮೇಲೆತ್ತಲು ಕಾರ್ಮಿಕರ ಕನಿಷ್ಠ ವೇತನ ಪ್ರಮಾಣ ಕಡಿಮೆ ಮಾಡುವುದೂ ಸೇರಿ ಕಾರ್ಮಿಕ ಕಾನೂನುಗಳಿಗೆ ವಿನಾಯಿತಿ ನೀಡಬೇಕು’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ(ಎಫ್‌ಕೆಸಿಸಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮುಂದಿನ ಸಾಲಿನ ಬಜೆಟ್ ಪೂರ್ವ ಮನವಿಯನ್ನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿರುವ ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕ್ಕಲ್‌ ಎಂ. ಸುಂದರ್‌, ‘ಕನಿಷ್ಠ ವೇತನದ ಪ್ರಮಾಣ ಕಡಿಮೆ ಮಾಡಿದರೆ ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಹೇಳಿದ್ದಾರೆ.

‘ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ ಹಣಕಾಸು ಒದಗಿಸಿರುವ ರಾಜ್ಯ ಹಣಕಾಸು ನಿಗಮಗಳನ್ನು ಆತ್ಮನಿರ್ಭರ ಪ್ಯಾಕೇಜ್ ವ್ಯಾಪ್ತಿಗೆ ತರಬೇಕು’ ಎಂದು ಕೋರಿದ್ದಾರೆ.

ADVERTISEMENT

‘ಆನ್‌ಲೈನ್ ವಹಿವಾಟು ಉತ್ತೇಜಿಸುವ ನಿಟ್ಟಿನಲ್ಲಿ ಯುಪಿಐ, ನೆಫ್ಟ್ ರೀತಿಯ ಆನ್‌ಲೈನ್ ಪಾವತಿ ಮೇಲೆ ಶುಲ್ಕ ವಿಧಿಸುವುದನ್ನು ತಡೆಯಬೇಕು. ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು ಒಂದಕ್ಕಿಂತ ಹೆಚ್ಚು ಚಾಲ್ತಿ ಖಾತೆಗಳನ್ನು ನಿರ್ವಹಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.