ADVERTISEMENT

ಒಂದೇ ಸೂರಿನಡಿ ಜ್ಞಾನದ ಹರಿವು: ಗೊಂದಲ ನಿವಾರಿಸಿಕೊಂಡ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 23:35 IST
Last Updated 12 ಏಪ್ರಿಲ್ 2025, 23:35 IST
ಬೆಂಗಳೂರು ಅರಮನೆ ಮೈದಾನದಲ್ಲಿ ಶನಿವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’:ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಪ್ರಜಾವಾಣಿ ಚಿತ್ರ
ಬೆಂಗಳೂರು ಅರಮನೆ ಮೈದಾನದಲ್ಲಿ ಶನಿವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’:ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ನಲ್ಲಿ ವಿದ್ಯಾರ್ಥಿಗಳು, ಅವರ ಪೋಷಕರು ಸಿಇಟಿ, ನೀಟ್‌ ಸಹಿತ ವಿವಿಧ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದರು. ಹೊಸ ಹೊಸ ಕೋರ್ಸ್‌ಗಳ ಬಗ್ಗೆ ಕುತೂಹಲಗೊಂಡರು. ವಿವಿಧ ಕೋರ್ಸ್‌ಗಳ ಉಪಯೋಗ, ಅದರ ಶುಲ್ಕಗಳ ವಿವರ ಪಡೆದರು.

60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮಳಿಗೆಗಳು, ವಿದ್ಯಾಸಾಲ ನೀಡುವ ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳ ಬಗ್ಗೆಯೇ ಮಾಹಿತಿ ನೀಡುವ ಆ್ಯಪ್‌ಗಳ ಮಳಿಗೆಗಳು ಸೇರಿ 70 ಮಳಿಗೆಗಳು ‘ಎಡ್ಯುವರ್ಸ್‌’ನಲ್ಲಿದ್ದವು. ಭಿನ್ನ ಮತ್ತು ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಶಿಕ್ಷಣ ಸಂಸ್ಥೆಗಳ ಮಳಿಗೆಗಳ ಮುಂದೆ ವಿದ್ಯಾರ್ಥಿಗಳು, ಪೋಷಕರು ಸಾಲುಗಟ್ಟಿ ನಿಂತು ಮಾಹಿತಿ ಪಡೆದರು. 

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ ಆ್ಯಂಡ್‌ ಮಷಿನ್ ಲರ್ನಿಂಗ್‌ (ಎಐ ಆ್ಯಂಡ್‌ ಎಂಎಲ್‌), ಏರೊನಾಟಿಕಲ್‌ ಎಂಜಿನಿಯರಿಂಗ್‌ ಮಾಡಿದರೆ, ಪಾದರಕ್ಷೆಗಳ ವಿನ್ಯಾಸ ಸಹಿತ ಶೇ 100ರಷ್ಟು ಉದ್ಯೋಗ ಗ್ಯಾರಂಟಿಯೊಂದಿಗೆ ಕೋರ್ಸ್‌ಗಳಿರುವ ಬಗ್ಗೆ ವಿದ್ಯಾರ್ಥಿಗಳು ಕಣ್ಣರಳಿಸಿ ವಿವರ ಪಡೆದರು.

ADVERTISEMENT

ದ್ವಿತೀಯ ಪಿಯು ಮುಗಿಸಿ ಯಾವ ಕಾಲೇಜು ಒಳ್ಳೆಯದು ಎಂದು ಕಾಲೇಜಿನಿಂದ ಕಾಲೇಜಿಗೆ ಅಲೆಯುವ ಬದಲು ‘ಅಪ್ಲಿ’ಯಲ್ಲಿ ನೋಂದಣಿ ಮಾಡಿಕೊಂಡರೆ ನಗರದ ವಿವಿಧ ವಿದ್ಯಾಸಂಸ್ಥೆಗಳ ಮಾಹಿತಿಯನ್ನು ಕೈಯಲ್ಲಿರುವ ಮೊಬೈಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಪಡೆಯುವ ಆ್ಯಪ್‌ಗಳು ಗಮನ ಸೆಳೆದವು.

ಬಿಎಸ್‌ಸಿ, ಎಂಬಿಎ, ಎಂಜಿನಿಯರಿಂಗ್‌ ಸಹಿತ ಭಿನ್ನ ಭಿನ್ನ ಕೋರ್ಸ್‌ಗಳ ಮಾಹಿತಿಗಳನ್ನು ಎಲ್ಲ ವಿದ್ಯಾಸಂಸ್ಥೆಗಳವರು ಆಕರ್ಷಕ ಕರಪತ್ರದೊಂದಿಗೆ ನೀಡಿದರು.

ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವಾದ ಎಡ್ಯುವರ್ಸ್‌ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ವೈವಿಧ್ಯಮಯ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಸಾಂಸ್ಥಿಕ ಪ್ರದರ್ಶನಗಳ ಜೊತೆಗೆ, ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಮಾರ್ಗದರ್ಶನ ನೀಡಲು ಪ್ರಖ್ಯಾತ ಭಾಷಣಕಾರರಿಂದ ಒಳನೋಟವುಳ್ಳ ಅವಧಿಗಳನ್ನು ಒಳಗೊಂಡಿರುತ್ತದೆ. 

ಪರೀಕ್ಷೆಯ ಪ್ರಮುಖ ಅಂಶಗಳು ಮತ್ತು ಕಾಲೇಜು ಆಯ್ಕೆ ಪ್ರಕ್ರಿಯೆಯ ಬಗ್ಗೆ, ಸಿಇಟಿ ಬಗ್ಗೆ ಶಿಕ್ಷಣ ತಜ್ಞ ಎ.ಎಸ್. ರವಿ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ತಯಾರಿ ಮಟ್ಟವನ್ನು ಪರಿಶೀಲಿಸಲು ಅನುಕೂಲವಾಗುವಂತೆ ಅಣಕು ಸಿಇಟಿ ಪರೀಕ್ಷೆ ನಡೆಯಿತು. ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡರು.

ಪಾದರಕ್ಷೆಯ ವಿನ್ಯಾಸದ ಕೋರ್ಸ್‌ ಬಗ್ಗೆ ಫೂಟ್‌ವೇರ್‌ ಡಿಸೈನ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಷನ್‌ನ ಪ್ರತಿನಿಧಿಗಳು ಮಾಹಿತಿ ನೀಡಿದರು. ಪ್ರಜಾವಾಣಿ ಚಿತ್ರ
ಅಮೋಘ ಡಿ.
ನಿಹಾರಿಕಾ
ಮಧು ನೆಲಮಂಗಲ
ಯೋಗಶ್ರೀ
ಐಶ್ವರ್ಯ
ತೇಜಾ ಹಸ್ನಿ
ಕರಿಬಸಪ್ಪ ಪಿ.
ಹೇಮಂತ್‌
ಪ್ರತೀಕ್ಷಾ
ಶ್ರದ್ಧಾ
ಭಾನುವಾರವೇ ನನಗೆ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಪ್ರವೇಶ ‍ಪರೀಕ್ಷೆ ಇದೆ. ಅದಕ್ಕೂ ಹಾಗೂ ಸಿಇಟಿ ‍ಪರೀಕ್ಷೆಗೂ ಉಪಯೋಗವಾಗಬಹುದು ಎಂದು ಹರ‍ಪನಹಳ್ಳಿಯಿಂದ ಬಂದೆ. ಮುಂದೆ ಯಾವ ಕೋರ್ಸ್ ಮಾಡಬಹುದು ಎಂಬ ಬಗ್ಗೆ ಇಲ್ಲಿ ನನಗೆ ಸ್ಪಷ್ಟತೆ ದೊರೆಯಿತು. ‘ಎಐ’ ವಿಷಯ ತಗೊಂಡು ಎಂಜಿನಿಯರಿಂಗ್‌ ಮಾಡಲು ನಿರ್ಧರಿಸಿದ್ದೇನೆ.
-ಅಮೋಘ ಜಿ. ವಿದ್ಯಾರ್ಥಿ ಹರಪನಹಳ್ಳಿ
ಯಾವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವ ವಿಷಯ ತೆಗೆದುಕೊಂಡರೆ ಒಳ್ಳೆಯದು ಎಂಬ ಪ್ರಶ್ನೆಗಳು ನನ್ನಲ್ಲಿತ್ತು. ಉತ್ತಮ ಗುಣಮಟ್ಟದ ಅನೇಕ ಕಾಲೇಜುಗಳ ವಿವರಗಳು ಇಲ್ಲಿ ಒಂದೇ ಕಡೆ ಸಿಕ್ಕಿತು. ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಎಲ್ಲ ಪ್ರಮುಖ ವಿದ್ಯಾಸಂಸ್ಥೆಗಳನ್ನು ಒಂದೆಡೆ ಸೇರಿಸಿ ಒಳ್ಳೆಯ ಕೆಲಸ ಮಾಡಿದೆ.
ನಿಹಾರಿಕಾ ವಿದ್ಯಾರ್ಥಿನಿ ಚಿಕ್ಕಬಾಣಾವರ
ಸಾಫ್ಟ್‌ವೇರ್‌ಗಿಂತ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಕ್ಷೇತ್ರವೇ ಚೆನ್ನಾಗಿದೆ ಎಂಬುದನ್ನು ‘ಎಡ್ಯುವರ್ಸ್‌’ನಲ್ಲಿ ಕಂಡುಕೊಂಡೆ. ಸಿಇಟಿಗೆ ತಯಾರಾಗುವ ಬಗೆ ಮುಂದಿನ ಕೋರ್ಸ್‌ಗಳ ಆಯ್ಕೆಗೆ ‘ಎಡ್ಯುವರ್ಸ್‌’ನಲ್ಲಿ ಮಾರ್ಗದರ್ಶನ ದೊರೆಯಿತು.
ಮಧು ವಿದ್ಯಾರ್ಥಿ ನೆಲಮಂಗಲ
ನಮ್ಮ ಸುತ್ತಮುತ್ತಲಿನಲ್ಲಿ ಹಲವು ಕಾಲೇಜುಗಳಿವೆ. ಯಾವುದನ್ನು ಆ‌ಯ್ಕೆ ಮಾಡಬೇಕು? ಯಾವುದನ್ನು ಬಿಡಬೇಕು ಎಂಬ ಗೊಂದಲಗಳಿದ್ದವು. ಎಲ್ಲಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯದು ಎಂಬ ಕಲ್ಪನೆ ಇರಲಿಲ್ಲ. ಬೇರೆ ಬೇರೆ ಕಾಲೇಜುಗಳಲ್ಲಿ ಬೇರೆ ಬೇರೆ ಕೋರ್ಸ್‌ಗಳಿವೆ. ಅದರಲ್ಲಿ ನಮಗೆ ಯಾವುದು ಸೂಕ್ತ ಎಂದು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. 
-ಯೋಗಶ್ರೀ ವಿದ್ಯಾರ್ಥಿನಿ ಬೈಯಪ್ಪನಹಳ್ಳಿ
‘ಎಡ್ಯುವರ್ಸ್‌’ ಸಮ್ಮೇಳನ ನಡೆಯುತ್ತಿದೆ ಎಂದು ತಂದೆ ತಿಳಿಸಿ ಇಲ್ಲಿಗೆ ಕರೆದುಕೊಂಡು ಬಂದರು. ಹೊಸಲೋಕ ಇಲ್ಲಿ ಅನಾವರಣಗೊಂಡಿದೆ. ಕಂಪ್ಯೂಟರ್‌ ಸೈನ್ಸ್‌ ತಗೊಬೇಕು ಎಂಬ ಯೋಚನೆ ಇದೆ. ಜತೆಗೆ ಬೇರೆ ಯಾವೆಲ್ಲ ಕೋರ್ಸ್‌ಗಳಿವೆ ಎಂದು ತಿಳಿಯಲು ಈ ಸಮ್ಮೇಳನ ಸಹಕಾರಿಯಾಯಿತು. 
ಐಶ್ವರ್ಯ ವಿದ್ಯಾರ್ಥಿನಿ ರಾಜಾಜಿನಗರ
ಈ ಕಾಲಕ್ಕೆ ಅಗತ್ಯ ಇರುವ ವಿಷಯ ಇಟ್ಟುಕೊಂಡು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮೇಳ ನಡೆಸುತ್ತಿದೆ. ಕಾಮೆಡ್‌–ಕೆ ನೀಟ್‌ ಬಗ್ಗೆ ಮಾಹಿತಿ ಮಾತ್ರವಲ್ಲ ಮುಂದೆ ಮಾಡಬೇಕಾದ ಕೋರ್ಸ್‌ಗಳ ಬಗ್ಗೆಯೂ ನಾವು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಕೌನ್ಸೆಲಿಂಗ್‌ ನಡೆಸಲು ಅವಕಾಶವಾಗಿದೆ.
–ಶ್ರದ್ಧಾ ಲರ್ನ್‌ಟೆಕ್‌ ಸಮಾಲೋಚಕರು

ಇಂದಿನ ಕಾರ್ಯಕ್ರಮ ‘ಎಡ್ಯುವರ್ಸ್‌’

ಎಕ್ಸ್‌ಪೊದ ಎರಡನೇ ದಿನಾವಾದ ಭಾನುವಾರ ಪ್ರಮುಖವಾಗಿ ಎರಡು ಗೋಷ್ಠಿಗಳು ನಡೆಯಲಿವೆ. ಎಐ ಮತ್ತು ನವೀನ ತಂತ್ರಜ್ಞಾನಗಳ ಪ್ರಾಮುಖ್ಯದ ಮೇಲೆ ಕೇಂದ್ರೀಕರಿಸುವ ಪರ್ಯಾಯ ವೃತ್ತಿ ಅವಕಾಶಗಳ ಕುರಿತು ‘ಐ ವಿಶ್ ಸಮ್‌ಒನ್ ಟೋಲ್ಡ್ ಮಿ ದಿಸ್ ಬಿಫೋರ್ ಮೈ ಫಸ್ಟ್ ಜಾಬ್’ ಮತ್ತು ‘ಮೈಂಡ್‌ಫುಲ್ ಮೊಮೆಂಟಮ್’ ಕೃತಿಗಳ ಲೇಖಕ ಸುಶಾಂತ್ ರಜಪೂತ್ ಮಾಹಿತಿ ನೀಡಲಿದ್ದಾರೆ. ವೃತ್ತಿ ಸಲಹೆಗಾರರಾದ ಅಮೀನ್-ಎ-ಮುದಸ್ಸರ್ ಅವರು ವೃತ್ತಿ ಸಮಾಲೋಚನೆಯ ಅಗತ್ಯದ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನದ ನಂತರ ವೈದ್ಯಕೀಯ ಆಕಾಂಕ್ಷಿಗಳಿಗೆ ಅಣಕು ‘ನೀಟ್‌’ ಪರೀಕ್ಷೆ ನಡೆಯಲಿದೆ.

ಆಸಕ್ತಿಗೆ ಅನುಗುಣವಾಗಿ ಆಯ್ಕೆ: ನಂದಿನಿ 

ಮಕ್ಕಳ ಆಸಕ್ತಿ ಗಮನಿಸಿ ಭವಿಷ್ಯದ ಗುರಿ ನಿಗದಿ ಮಾಡಿಕೊಳ್ಳುವ ಅವಕಾಶ ಕಲ್ಪಿಸುವುದೇ ಯಶಸ್ಸಿನ ಮೊದಲ ಮೆಟ್ಟಿಲು ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಹೇಳಿದರು. ‘ಎಡ್ಯುವರ್ಸ್‌’ನಲ್ಲಿ ಪ್ರೇರಣಾ ಭಾಷಣ ಮಾಡಿದ ಅವರು ಮಕ್ಕಳ ಮನಸಿಸ್ಸಿನಲ್ಲಿ ಮೂಡಿದ ಆಸಕ್ತಿಕರ ವಿಷಯಗಳನ್ನು ಗುರುತಿಸಿ ಆಸರೆಯಾಗಿ ನಿಂತರೆ ಅವಕಾಶಗಳನ್ನು ಮಾಡಿಕೊಟ್ಟರೆ ಆಯಾ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದ ಅವರು ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್ ಅವರ ಕನಸಿಗೆ ಪೋಷಕರು ನೀರೆರೆದ ರೀತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಮಕ್ಕಳಿಗೆ ತುಂಬಾ ಸ್ವಾತಂತ್ರ್ಯ ಕೊಡುವುದು ತುಂಬಾ ನಿರ್ಬಂಧ ಹಾಕುವುದು ಎರಡೂ ಅಪಾಯಕಾರಿ. ಸಾಮಾಜಿಕ ಜಾಲತಾಣ ಅತಿಯಾದ ತಾಂತ್ರಿಕತೆಯ ಅಪಾಯಗಳಿಗೆ ಮಕ್ಕಳು ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.  ಸರ್ಕಾರಿ ವ್ಯವಸ್ಥೆ ಎಂದರೆ ಭ್ರಷ್ಟಾಚಾರ ಒತ್ತಡ ಎಂದು ಪಲಾಯನ ಮಡುವ ಬದಲು ವ್ಯವಸ್ಥೆಯ ಒಳಗಿದ್ದು ಸುಧಾರಣೆ ತರಲು ಯುವಕರು ಮನಸ್ಸು ಮಾಡಬೇಕು. ಆಡಳಿತದ ಭಾಗವಾಗಬೇಕು ಎಂದು ಸಲಹೆ ನೀಡಿದರು.

ಬೆರಗು ಮೂಡಿಸುವ ಕೃತಕ ಬುದ್ಧಿಮತ್ತೆ: ಬೆಳವಾಡಿ

‘ಕೃತಕ ಬುದ್ಧಿಮತ್ತೆ ಜತೆಗಿನ ಜಾಗತಿಕ ಬದಲಾವಣೆಯ ವೇಗ ಬೆರಗು ಮೂಡಿಸುತ್ತಿದೆ. ಭವಿಷ್ಯದ ಮುಂದಿನ ಹೆಜ್ಜೆಗೂ ಸವಾಲಾಗಿದೆ. ತರಗತಿ ಶಿಕ್ಷಣದ ಪರಿಕಲ್ಪನೆಯೇ ಬದಲಾಗಲಿದೆ’ ಎಂದು ನಟ ಪ್ರಕಾಶ್‌ ಬೆಳವಾಡಿ ಹೇಳಿದರು. ಕೃತಕ ಬುದ್ಧಿಮತ್ತೆಯ ಫಲವಾಗಿ ಬೋಧನೆ ಕಲಿಕೆಯ ಸ್ವರೂಪವೂ ಬದಲಾಗಲಿದೆ. ಬೋಧಕರು ತಂತ್ರಜ್ಞಾನ ಬಳಸಿಕೊಂಡು ಯಾವುದೇ ಭಾಷೆಯಲ್ಲಾದರೂ ಕಲಿಸಬಹುದು. ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಿಗಾಗಿ ಮಾತ್ರ ಶಾಲೆಗೆ ಹೋಗಬೇಕಾಗುವ ದಿನಗಳು ಬರುತ್ತವೆ ಎಂದರು.  ತಂತ್ರಜ್ಞಾನದ ಬಳಕೆಯ ವೇಗ ನೋಡಿದರೆ ಜಾಗತಿಕ ಭವಿಷ್ಯ ಏನಾಗಲಿದೆ ಎಂದು ಊಹಿಸಲೂ ಸಾಧ್ಯವಿಲ್ಲ. ಚೆಸ್‌ ಚಾಂಪಿಯನ್‌ ಗ್ಯಾರಿ ಕಾಸ್ಪರೋವ್‌ ಅವರು 1996ರಲ್ಲಿ ಐಬಿಎಂನ ಡೀಪ್‌ಬ್ಲೂ ಅನ್ನು ಎದುರಿಸಿದಾಗ ಅವರು ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದರು. ಆದರೆ ಬಹು ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ಈಗ ಎಂಜಿನಿಯರಿಂಗ್‌ ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳನ್ನೂ ಕೃತಕ ಬುದ್ಧಿಮತ್ತೆ ಆವರಿಸಿಕೊಂಡಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.