ADVERTISEMENT

ಫುಟ್‌ಪಾತ್‌ ಮೇಲೆ ಸವಾರಿ ಬಿಸಿ ಮುಟ್ಟಿಸಿದ ಅಜ್ಜಿ!

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:46 IST
Last Updated 13 ಜುಲೈ 2019, 19:46 IST
ಫುಟ್‌ಪಾತ್‌ ಮೇಲೆ ಬೈಕ್ ಚಲಾಯಿಸಿಕೊಂಡು ಹೊರಟಿದ್ದ ಸವಾರನನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದ ಅಜ್ಜಿ
ಫುಟ್‌ಪಾತ್‌ ಮೇಲೆ ಬೈಕ್ ಚಲಾಯಿಸಿಕೊಂಡು ಹೊರಟಿದ್ದ ಸವಾರನನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದ ಅಜ್ಜಿ   

ಬೆಂಗಳೂರು: ಫುಟ್‌ಪಾತ್‌ ಮೇಲೆ ಬೈಕ್‌ ಓಡಿಸಿಕೊಂಡು ಹೊರಟಿದ್ದ ಸವಾರರನ್ನು, ಅಜ್ಜಿಯೊಬ್ಬರು ತಡೆದು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೋರಮಂಗಲ 7ನೇ ಹಂತದ 20ನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ‘ಸವಾರರೇ ವಾಪಸ್ ರಸ್ತೆಗೆ ಹೋಗಿ...’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಆ ವಿಡಿಯೊ ಶೇರ್ ಆಗುತ್ತಿದೆ. ಅಜ್ಜಿಯ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಜ್ಜಿಯ ಹೆಸರು ಗೊತ್ತಾಗಿಲ್ಲ.

‘ಬೆಂಗಳೂರು ಸಿಟಿ ಪೊಲೀಸ್’ ಹಾಗೂ ‘ಬೆಂಗಳೂರು ಟ್ರಾಫಿಕ್ ಪೊಲೀಸ್’ ಹೆಸರಿನ ಖಾತೆಗಳಿಗೂ ವಿಡಿಯೊವನ್ನು ಟ್ಯಾಗ್ ಮಾಡಲಾಗಿದ್ದು, ಅಜ್ಜಿಯ ಕೆಲಸವನ್ನು ಪೊಲೀಸರು ಸಹ ಶ್ಲಾಘಿಸುತ್ತಿದ್ದಾರೆ.

ADVERTISEMENT

ಆಗಿದ್ದೇನು?: ಸ್ಥಳೀಯ ನಿವಾಸಿಯಾದ ಅಜ್ಜಿ, ಕೋರಮಂಗಲ 7ನೇ ಹಂತದ 20ನೇ ಮುಖ್ಯರಸ್ತೆಯ ಫುಟ್‌ಪಾತ್‌ನಲ್ಲಿಶುಕ್ರವಾರ ಬೆಳಿಗ್ಗೆ 11ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದರು.

ಅದೇ ಸಂದರ್ಭದಲ್ಲಿ ಐವರು ಸವಾರರು ಫುಟ್‌ಪಾತ್‌ ಮೇಲೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಅದನ್ನು ಗಮನಿಸಿದ ಅಜ್ಜಿ, ಸವಾರರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದರು. ತಮ್ಮ ಬಳಿಯ ಕೋಲು ತೋರಿಸಿ, ವಾಪಸ್ ರಸ್ತೆಗೆ ಹೋಗುವಂತೆ ಎಚ್ಚರಿಕೆ ನೀಡಿದ್ದರು.

‘ಬೈಕ್ ಓಡಿಸಲು ಇದು ರಸ್ತೆಯಲ್ಲ, ಪಾದಚಾರಿಗಳು ಓಡಾಡುವ ಫುಟ್‌ಪಾತ್‌. ವಾಪಸ್ ರಸ್ತೆಗೆ ಹೋಗು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಅಜ್ಜಿ ಅವಾಜ್ ಹಾಕಿದ್ದರು. ಅಜ್ಜಿಯ ಮಾತಿನಿಂದ ಹೆದರಿದ ಸವಾರರು, ಫುಟ್‌ಪಾತ್‌ನಿಂದ ರಸ್ತೆಗೆ ಬೈಕ್ ಇಳಿಸಿಕೊಂಡು ಹೊರಟು ಹೋಗಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.