ಬೆಂಗಳೂರು: ‘ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಬಾಣಂತಿಯರ ಸಾವು ಸಂಭವಿಸುತ್ತಿದ್ದಲ್ಲಿ ತಜ್ಞ ವೈದ್ಯರ ತಂಡ ರಚಿಸಿ ತನಿಖೆ ನಡೆಸಬೇಕು. ತಂಡದ ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
16 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳು ಮತ್ತು ಸಮಸ್ಯೆಗಳ ಕುರಿತು ತಯಾರಿಸಿರುವ ವರದಿ ಹಾಗೂ ಕೈಗೊಳ್ಳಬೇಕಾದ ಶಿಫಾರಸುಗಳನ್ನು ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಸಲ್ಲಿಸಿದರು.
ವರದಿಯಲ್ಲಿಯೇನಿದೆ? :ಬಾಣಂತಿಯರ ಸಾವು ನಿಯಂತ್ರಿಸಲು ಸ್ಕ್ಯಾನಿಂಗ್, ಪೋಲಿಕ್ ಆಸಿಡ್ ಮಾತ್ರೆ ತೆಗೆದುಕೊಳ್ಳುವುದು ಹಾಗೂ ಊಟೋಪಚಾರದ ಕುರಿತು ಗರ್ಭಿಣಿಯರಿಗೆ ಸರಿಯಾದ ಮಾಹಿತಿ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಬೇಕು. ರಕ್ತ ಹಾಗೂ ಥೈರಾಯ್ಡ್ ಪರೀಕ್ಷೆಗಳನ್ನು ನಡೆಸಲು ಪ್ರಯೋಗಾಲಯ ಸ್ಥಾಪಿಸಬೇಕು. ಇದಕ್ಕೆ ಬೇಕಾದ ಸ್ತ್ರೀರೋಗ ತಜ್ಞರು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಿಸಬೇಕು.
ಹೆರಿಗೆ ನಂತರ ಅಧಿಕ ರಕ್ತ ಸ್ರಾವ ನಿರ್ವಹಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಬಕ್ರಿ ಬಲೂನ್’ ಅಳವಡಿಸಿಕೊಳ್ಳಬೇಕು. ಹೆರಿಗೆಯ ಎರಡು ವಾರಗಳ ಮುಂಚೆ ಅನಿಮಿಯಾ, ಎಚ್‌ಟಿಎನ್ ಪತ್ತೆ ಹಚ್ಚಬೇಕು. ರಾಜ್ಯದಲ್ಲಿ ಮೃತಪಟ್ಟಿರುವ ಬಾಣಂತಿಯರ ಮಕ್ಕಳಿಗೆ ಸರ್ಕಾರ ಉನ್ನತ ವಿದ್ಯಾಭ್ಯಾಸದವರೆಗೆ ಉಚಿತ ಶಿಕ್ಷಣ ನೀಡಬೇಕು.
ಸರ್ಕಾರ ನೀಡುವ ಮೊಟ್ಟೆ, ಪೌಷ್ಠಿಕ ಆಹಾರ ಗರ್ಭಿಣಿಯರಿಗೆ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರಿಗೆ ಬಿಸಿನೀರು, ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸ್ವಚ್ಛ ಮತ್ತು ಸಮರ್ಪಕ ಶೌಚಾಲಯಗಳ ಕೊರತೆ, ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯದ ರಾಶಿ ಹಾಕಿದೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಈ ಎಲ್ಲ ಅಂಶಗಳನ್ನು ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಗಮನಕ್ಕೆ ಬಂದಿದೆ. ತಕ್ಷಣವೇ ಈ ಸಮಸ್ಯೆಗಳನ್ನು ಸರಿಪಡಿಸಬೇಕು.
‘ಕೇಂದ್ರ ಔಷಧ ಪ್ರಯೋಗಾಲಯ ಪೂರೈಸುವ ಔಷಧಿಗಳ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಕೇಂದ್ರ ಸರ್ಕಾರ ಪೂರೈಸುವ ಔಷಧಿಗಳ ಅವಧಿಯನ್ನೂ ಪರಿಶೀಲಿಸಬೇಕು. ಔಷಧ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ ಅವಧಿ ಮುಗಿದ ಔಷಧಿಗಳನ್ನು ಪೂರೈಸಿದ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿಗಳು ಹಾಗೂ ಸಮಸ್ಯೆಗಳು ಹಾಗೂ ಬಾಣಂತಿಯರ ಸಾವಿನ ಬಗ್ಗೆ ವಿವರವಾದ ವರದಿ ನೀಡುವಂತೆ ತಿಳಿಸಿದ್ದಾರೆಡಾ.ನಾಗಲಕ್ಷ್ಮಿ ಚೌಧರಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
‘ಸರ್ಕಾರಿ ಆಸ್ಪತ್ರೆಗಳಲ್ಲಿನ ಶಸ್ತ್ರ ಚಿಕಿತ್ಸಾ ಕೊಠಡಿ ಐಸಿಯು ವಾರ್ಡ್‌ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕಾಲಕಾಲಕ್ಕೆ ಶಸ್ತ್ರಚಿಕಿತ್ಸೆ ರಕ್ತ ಪರೀಕ್ಷೆಗೆ ಬಳಸುವ ಉಪಕರಣಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಸೋಂಕು ನಿವಾರಕ ದ್ರಾವಣಗಳಿಂದ ಉಪಕರಣಗಳನ್ನು ಸ್ವಚ್ಛಗೊಳಿಸಬೇಕು. ಆಟೊಕ್ಲೇವ್ ವಿಧಾನದ ಮೂಲಕ ಉಪಕರಣಗಳನ್ನು ಸ್ಟೆರಲೈಸೇಶನ್ ಮಾಡಬೇಕು’ ಎಂದು ವರದಿ ಶಿಫಾರಸು ಮಾಡಿದೆ. ‘ಸರ್ಕಾರಿ ಆಸ್ಪತ್ರೆಗಳಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್‌ಗಳು ಪಾಚಿಕಟ್ಟಿಕೊಂಡಿವೆ. ನೀರು ಕಲುಷಿತಗೊಂಡಿದ್ದು ಅದೇ ನೀರನ್ನು ಹೆರಿಗೆ ಕೊಠಡಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಇರುವ ಪ್ರಾಣಾಪಾಯದ ಸಾಧ್ಯತೆ ಇದೆ. ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು ಹಾಗೂ ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಬೇಕು’ ಎಂದು ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.