ADVERTISEMENT

ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳ ನೋಂದಣಿ: ರೋಸ್‌ಮೆರ್ಟಾ ತಾಂತ್ರಿಕ ತಜ್ಞ ಬಂಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 10:33 IST
Last Updated 19 ಅಕ್ಟೋಬರ್ 2021, 10:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳ ನೋಂದಣಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಈ ಸಂಬಂಧ ಆರೋಪಿ ಗಿರೀಶ್ ಎಂಬಾತನನ್ನು ಮಂಗಳವಾರ ಬಂಧಿಸಿದ್ದಾರೆ.

‘ಬಂಧಿತ ಗಿರೀಶ್, ಸಾರಿಗೆ ಇಲಾಖೆಗೆ ಸ್ಮಾರ್ಟ್‌ ಕಾರ್ಡ್‌ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ‘ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿ ಉದ್ಯೋಗಿ. ಕಂಪನಿಯಿಂದ ತನಗೆ ನೀಡಿದ್ದ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ಆರೋಪಿ ಕೃತ್ಯ ಎಸಗುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

'ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀರನ್ನು ಕೋರಲಾಗುವುದು. ಈತನ ಜೊತೆ ಬೇರೆ ಯಾರೆಲ್ಲ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಹೊರ ರಾಜ್ಯಗಳ ಹೆಸರಿನಲ್ಲಿ ನಕಲಿ ಸಂಖ್ಯೆ: ‘ಕಂಪನಿಯ ತಾಂತ್ರಿಕ ತಜ್ಞನಾಗಿದ್ದ ಗಿರೀಶ್, ಹೆಚ್ಚಾಗಿ ಐಷಾರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಿದೆ’ ಎಂದೂ ಅಧಿಕಾರಿ ತಿಳಿಸಿದರು.

‘ಹೊರ ರಾಜ್ಯಗಳ ಹೆಸರಿನಲ್ಲಿ ಕಾರುಗಳಿಗೆ ನಕಲಿ ನೋಂದಣಿ ಸಂಖ್ಯೆ ಲಗತ್ತಿಸುತ್ತಿದ್ದ ಆರೋಪಿ, ಅದೇ ನೋಂದಣಿ ಸಂಖ್ಯೆ ಆಧರಿಸಿ ಪ್ರಕ್ರಿಯೆ ಆರಂಭಿಸುತ್ತಿದ್ದ. ವಾಹನಗಳ ಮಾಲೀಕರಿಂದ ಯಾವುದೇ ತೆರಿಗೆ ಕಟ್ಟಿಸಿಕೊಳ್ಳದೇ ‘ಕೆಎ’ ನೋಂದಣಿ ಮಾಡಿಸಿಕೊಡುತ್ತಿದ್ದ. ಸರ್ಕಾರ ನಿಗದಿಪಡಿಸಿದ್ದ ತೆರಿಗೆಗಿಂತಲೂ ಕಡಿಮೆ ಹಣವನ್ನು ತಾನೇ ಪಡೆದುಕೊಳ್ಳುತ್ತಿದ್ದ’ ಎಂದೂ ಹೇಳಿದರು.

‘ಆರೋಪಿ ಕೃತ್ಯದ ಬಗ್ಗೆ ಇತ್ತೀಚೆಗಷ್ಟೇ ಆರ್‌ಟಿಒ ಅಧಿಕಾರಿಗಳು ದೂರು ನೀಡಿದ್ದರು. ಅದರ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.