ADVERTISEMENT

ಸಚಿವ ಜಾರ್ಜ್‌ ಹೆಸರು ಹೇಳಿ ವಂಚನೆ: ಬಂಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 19:34 IST
Last Updated 8 ಜೂನ್ 2019, 19:34 IST
ಸುಧಾಕರ್
ಸುಧಾಕರ್   

ಬೆಂಗಳೂರು: ಸಚಿವ ಕೆ.ಜೆ. ಜಾರ್ಜ್‌ ಪರಿಚಯವಿದೆ. ಅವರ ಮೂಲಕ ವಾಹನ ಚಾಲನಾ ಪರವಾನಗಿ (ಡಿಎಲ್‌), ಪ್ಯಾನ್‌ ಕಾರ್ಡ್‌, ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಂಚಿಸುತ್ತಿದ್ದ ವ್ಯಕ್ತಿಯೊಬ್ಬನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಾಗನಾಥಪುರ ನಿವಾಸಿ ಸುಧಾಕರ್ ಅಲಿಯಾಸ್‌ ಕಣ್ಣನ್‌ ಬಂಧಿತ ಆರೋಪಿ.

ಕಾರ್ಯಕ್ರಮವೊಂದರಲ್ಲಿ ಜಾರ್ಜ್ ಜೊತೆ ಫೋಟೊ ತೆಗೆಸಿಕೊಂಡಿದ್ದ ಸುಧಾಕರ್‌, ಅದನ್ನು ತೋರಿಸಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ADVERTISEMENT

‘₹ 50 ಸಾವಿರ ನೀಡಿದರೆ ಕ್ರೈಸ್ಟ್‌ ಅಕಾಡೆಮಿ ಕಾಲೇಜಿನಲ್ಲಿ ಡೊನೇಷನ್ ಇಲ್ಲದೆ ಮಗನಿಗೆ ಪ್ರವೇಶ ಕೊಡಿಸುವುದಾಗಿ ಸುಧಾಕರ್‌ ನನ್ನನ್ನು ನಂಬಿಸಿದ್ದ. ಆದರೆ, ಸೀಟು ಮಾಡಿಸಿ ಕೊಟ್ಟಿಲ್ಲ. ಆದರೆ, ₹ 25 ಸಾವಿರ ಕೊಡಬೇಕೆಂದು ಒತ್ತಾಯಿಸಿದ್ದ. ಹಣ ಕೊಡಲು ನಿರಾಕರಿಸಿದಾಗ, ಮನೆಗೆ ಬಂದು 26 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾನೆ’ ಎಂದು ನಾಗರಾಜ್‌ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈತ ಕೆಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.