ADVERTISEMENT

₹2 ಕೋಟಿ ಸುಲಿಗೆ: ದರೋಡೆ ನಾಟಕವಾಡಿದ್ದ ದೂರುದಾರ ಸೇರಿ 15 ಮಂದಿ ಸೆರೆ

ವಿದ್ಯಾರಣ್ಯಪುರ ಠಾಣೆ ಪೊಲೀಸರ ಕಾರ್ಯಾಚರಣೆ: 15 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 14:27 IST
Last Updated 22 ಜುಲೈ 2025, 14:27 IST
ಬೆಂಜಮಿನ್‌ ಹರ್ಷ
ಬೆಂಜಮಿನ್‌ ಹರ್ಷ   

ಬೆಂಗಳೂರು: ಕಪ್ಪು ಹಣವನ್ನು ಡಾಲರ್‌ಗೆ ಪರಿವರ್ತಿಸಿಕೊಡುವುದಾಗಿ ನಂಬಿಸಿ ಉದ್ಯಮಿಯನ್ನು ಕರೆಸಿಕೊಂಡು ₹2 ಕೋಟಿ ಸುಲಿಗೆ ಮಾಡಿ, ದರೋಡೆಯ ನಾಟಕವಾಡಿದ್ದ ದೂರುದಾರ ಸೇರಿ 15 ಮಂದಿಯನ್ನು ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದೂರುದಾರ, ಕೆಂಗೇರಿ ಉಪನಗರದ ನಿವಾಸಿ ವಿ.ಹರ್ಷ(33), ಯಲಹಂಕದ ಚೊಕ್ಕನಹಳ್ಳಿಯ ನಿವಾಸಿ ಬೆಂಜಮಿನ್‌ ಹರ್ಷ (45), ತುಮಕೂರು ಜಿಲ್ಲೆಯ ನಜರಾಬಾದ್‌ನ ಎಂ.ರಕ್ಷಿತ್‌ (29), ಬೆಂಗಳೂರು ಬಾಗಲಗುಂಟೆಯ ಅಂದಾನಪ್ಪ ಲೇಔಟ್‌ನ ಎಚ್‌.ಎಸ್‌.ಚಂದ್ರಶೇಖರ್‌ (58), ವಿದ್ಯಾರಣ್ಯಪುರ ಎಂ.ಎಸ್‌.ಪಾಳ್ಯದ ನಿವಾಸಿ ಸೈಯದ್‌ ಅಕೀಬ್‌(30) ಹಾಗೂ ಮೊಹಮದ್ ಸುಹೇಲ್‌ (28), ಸಲ್ಮಾನ್‌ ಖಾನ್‌ (32), ಎಸ್‌.ಮುಹೀಬ್‌ (30), ಚಾಮರಾಜಪೇಟೆಯ ಮೋಸಿನ್‌ ಖಾನ್‌(32), ಬನಶಂಕರಿಯ ಸಲ್ಮಾನ್‌ ಖಾನ್‌ (35), ಎಂ.ಎಸ್‌.ಪಾಳ್ಯದ ಸೈಯದ್‌ ಅಮ್ಜದ್‌ (31), ಸೈಯದ್‌ ಅಫ್ರಿದಿ (27), ಕೆ.ಆರ್.ಪುರ ದೇವಸಂದ್ರದ ಸೈಯದ್ ವಸೀಂ(23), ವಿನಾಯಕನಗರದ ಶೇಖ್‌ ವಸೀಂ, ಇಲಿಯಾಸ್ ನಗರದ ಮೊಹಮ್ಮದ್ ಅತೀಕ್‌ (38) ಬಂಧಿತರು.

ತಲೆಮರೆಸಿಕೊಂಡಿರುವ ಸಂದೀಪ್‌, ಶೇಖ್‌ ಸಾದು, ರಾಕೇಶ್‌ ಹಾಗೂ ಮೊಹಮ್ಮದ್‌ ಸಾಬೀರ್ ಅವರಿಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಬಂಧಿತರಿಂದ ₹1.11 ಕೋಟಿ ನಗದು, ಕೃತ್ಯಕ್ಕೆ ಬಳಸಿದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ, ಎರಡು ಆಟೊ, ಎರಡು ಚಾಕು, ಒಂದು ಲಾಂಗ್‌, ಎಂಟು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಚಿಕ್ಕಪೇಟೆಯ ಎಲೆಕ್ಟ್ರಿಕ್‌ ಉದ್ಯಮಿಯೊಬ್ಬರಿಂದ ಆರೋಪಿ ವಿ. ಹರ್ಷ ಹಣ ಪಡೆದುಕೊಂಡು ಬಂದಿದ್ದ. ಕಪ್ಪು ಹಣವನ್ನು ಡಾಲರ್‌ಗೆ ಪರಿವರ್ತಿಸಿ ಕೊಡುವುದಾಗಿ ನಂಬಿಸಿದ್ದ. ಅಲ್ಲದೇ ಹಣವನ್ನು ದ್ವಿಗುಣಗೊಳಿಸಿ ಕೊಡುವುದಾಗಿಯೂ ಹೇಳಿದ್ದ. ಆರೋಪಿಯ ಮಾತು ನಂಬಿದ್ದ ಉದ್ಯಮಿ ₹2 ಕೋಟಿ ಹಣ ನೀಡಿದ್ದರು. ಆ ಹಣವನ್ನು ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಎಂ.ಎಸ್.ಪಾಳ್ಯದ ಮಳಿಗೆಗೆ ತಂದು ಎಣಿಸಲಾಗುತ್ತಿತ್ತು. ಹಣ ಎಣಿಸುತ್ತಿರುವಾಗ ಕಾರು, ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು, ಏಕಾಏಕಿ ಮಳಿಗೆಯ ಒಳಗೆ ನುಗ್ಗಿದ್ದರು. ಮಾರಕಾಸ್ತ್ರ ತೋರಿಸಿ ₹2 ಕೋಟಿ ನಗದನ್ನು ಚೀಲಕ್ಕೆ ತುಂಬಿಕೊಂಡು ಮಳಿಗೆಯ ರೋಲಿಂಗ್ ಶೆಟರ್ ಹಾಕಿ ಪರಾರಿ ಆಗಿದ್ದರು. ಹಣ ಎಣಿಸುವಾಗ ದರೋಡೆ ಆಯಿತೆಂದು ನಾಟಕವಾಡಿ ವಿ.ಹರ್ಷ ದೂರು ನೀಡಿದ್ದ ಎಂದು ಪೊಲೀಸರು ಹೇಳಿದರು.

‘ವಿ.ಹರ್ಷ ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ, ದೂರುದಾರನೇ ಸಂಚು ರೂಪಿಸಿದ್ದು ಕಂಡುಬಂತು. ತನ್ನ ಸಹಚರರನ್ನು ಕರೆಸಿಕೊಂಡು ದರೋಡೆಯ ನಾಟಕವಾಡಿದ್ದು ಗೊತ್ತಾಯಿತು’ ಎಂದು ಪೊಲೀಸರು ಹೇಳಿದರು.

ಹೆಗಡೆ ನಗರದ ಜಾಮೀಯಾ ಮಸೀದಿಯ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಅವರು ನೀಡಿದ ಸುಳಿವು ಆಧರಿಸಿ ಬೆಂಗಳೂರಿನ ಬಾಗಲಗುಂಟೆ, ಚಿಕ್ಕಮಗಳೂರು, ಹಾಲೇನಹಳ್ಳಿ, ಮಂಗಳೂರು, ಅಜ್ಮೇರ್‌ ಹಾಗೂ ಬೀದರ್‌ನ ಹಳೆಯ ನಗರದಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.


ಎಂ.ರಕ್ಷಿತ್‌
ಪಾಷಾ 
ಹರ್ಷ 
ಸುಹೇಲ್‌ 
ಸಲ್ಮಾನ್ ಖಾನ್‌ 
ಸೈಯದ್ ಅಮ್ಜದ್‌ 
ಸೈಯದ್ ಅಫ್ರಿದ್  
ವಸೀಂ 
ಸನ್ಮಾನ್‌ ಖಾನ್‌ 
ಮೋಸಿನ್‌ ಖಾನ್  
ಚಂದ್ರಶೇಖರ್‌ 
ಅತೀಕ್‌ 
ಮುಹೀಬ್‌ 

Quote - ತನಿಖೆಯ ವೇಳೆ ದೂರುದಾರ ವಿ.ಹರ್ಷನೇ ಪ್ರಕರಣದ ಸೂತ್ರಧಾರ ಎಂಬುದು ಗೊತ್ತಾಗಿ ರಾಜ್ಯದ ವಿವಿಧೆಡೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಯಿತು –ಸೀಮಂತ್‌ ಕುಮಾರ್ ಸಿಂಗ್‌ ನಗರ ಪೊಲೀಸ್ ಕಮಿಷನರ್‌

Cut-off box - ನಾಟಕವಾಡಿದ್ದ ಹರ್ಷ  ‘ಕೆಂಗೇರಿ ಉಪ ನಗರದಲ್ಲಿ ಕಂಪನಿ ನಡೆಸುತ್ತಿದ್ದೇನೆ. ಆಯಿಲ್ ಉದ್ಯಮ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಹಣ ಇಟ್ಟುಕೊಂಡಿದ್ದೆ. ಸ್ನೇಹಿತರ ಬಳಿಯೂ ಸಾಲ ಪಡೆದುಕೊಂಡಿದ್ದೆ. ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಜರ್ಮನಿಯಿಂದ ಖರೀದಿಸಬೇಕಿತ್ತು. ₹2 ಕೋಟಿ ನಗದನ್ನು ಡಾಲರ್‌ಗೆ ಪರಿವರ್ತಿಸಿ ಕೊಡುವಂತೆ ಪ್ರಕಾಶ್‌ ಅಗರ್‌ವಾಲ್‌ ಹಾಗೂ ನನ್ನ ಸ್ನೇಹಿತ ರಕ್ಷಿತ್‌ಗೆ ತಿಳಿಸಿದ್ದೆ. ಅವರಿಬ್ಬರು ನಾರಾಯಣ ಭರತ್‌ ಅವರನ್ನು ಪರಿಚಯಿಸಿದ್ದರು. ನಾರಾಯಣ್ ಭರತ್‌ ಅವರು ಬೆಂಜಮಿನ್‌ ಹರ್ಷ ಎಂಬುವರನ್ನು ಪರಿಚಯಿಸಿದ್ದರು. ಇವರ ಕಡೆಯಿಂದ ನಿನ್ನ ಕೆಲಸ ಆಗಲಿದೆ ಎಂಬುದಾಗಿಯೂ ತಿಳಿಸಿದ್ದರು. ಬೆಂಜಮಿನ್‌ ಹರ್ಷಗೆ ಕರೆ ಮಾಡಿ ನನ್ನ ಬಳಿಯಿರುವ ಹಣವನ್ನು ಡಾಲರ್‌ಗೆ ಪರಿವರ್ತಿಸಿ ಕೊಡುವಂತೆ ಕೇಳಿಕೊಂಡಿದ್ದೆ. ಹಣವನ್ನು ಎಂ.ಎಸ್‌.ಪಾಳ್ಯಕ್ಕೆ ತರುವಂತೆ ತಿಳಿಸಿದ್ದರು. ಜೂನ್‌ 25ರಂದು ಮಧ್ಯಾಹ್ನ ಎರಡು ಗಂಟೆಗೆ ಸ್ನೇಹಿತರಾದ ನಾಗೇಂದ್ರ ಹಾಗೂ ಶಾಂತಕುಮಾರ್‌ ಜತೆಗೆ ಕಾರಿನಲ್ಲಿ ಹಣ ತೆಗೆದುಕೊಂಡು ಹೋಗಿದ್ದೆ. ಹಣ ಎಣಿಕೆ ಮಾಡುತ್ತಿದ್ದ ವೇಳೆ ಅಪರಿಚಿತರು ಎ.ಕೆ.ಎಂಟರ್‌ ಪ್ರೈಸಸ್‌ ಮಳಿಗೆಗೆ ನುಗ್ಗಿ ದರೋಡೆ ಮಾಡಿಕೊಂಡು ಹೋಗಿದ್ದರು ಎಂಬುದಾಗಿ ವಿ.ಹರ್ಷ ದೂರು ನೀಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.