ADVERTISEMENT

ಸ್ವಿಗ್ಗಿ ಸಿಬ್ಬಂದಿಗೆ ಆಂಬುಲೆನ್ಸ್ ಸೇವೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 16:36 IST
Last Updated 17 ಜನವರಿ 2023, 16:36 IST
   

ಬೆಂಗಳೂರು: ಮೊಬೈಲ್ ಆ್ಯಪ್ ಆಧರಿತ ಆಹಾರ ಪೂರೈಕೆ ಕಂಪನಿ ಸ್ವಿಗ್ಗಿ ತನ್ನ ಆಹಾರ ವಿತರಣಾ ಪ್ರತಿನಿಧಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸುವುದಾಗಿ ಘೋಷಿಸಿದೆ.

ಈ ಸಂಬಂಧ ಸಂಸ್ಥೆಯು ಡಯಲ್ 4242 ಆಂಬುಲೆನ್ಸ್ ಸರ್ವೀಸಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ‘ತುರ್ತು ಸಂದರ್ಭಗಳಲ್ಲಿ ವಿತರಣಾ ಪ್ರತಿನಿಧಿಗಳು ಉಚಿತ ಸಹಾಯವಾಣಿ ಸಂಖ್ಯೆ 1800 267 4242ಕ್ಕೆ ಕರೆ ಮಾಡಿ, ಆಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಕಾರ್ಯಾವಧಿಯಲ್ಲಿ ಆ್ಯಪ್‌ನಿಂದ ಹೊರಬರದೇ, ಎಸ್ಒಎಸ್ ಬಟನ್ (ತುರ್ತು ಸೇವೆ ಬಟನ್) ಒತ್ತಿದರೂ ಸ್ಥಳಕ್ಕೆ ಆಂಬುಲೆನ್ಸ್ ಬರಲಿದೆ’ ಎಂದು ಸಂಸ್ಥೆ ತಿಳಿಸಿದೆ.

‘ಈ ಪ್ರಕ್ರಿಯೆಗೆ ಯಾವುದೇ ದಾಖಲಾತಿಗಳ ಅಗತ್ಯವಿಲ್ಲ. ಆದರೆ, ವಿತರಣಾ ಪ್ರತಿನಿಧಿಗಳು ತಮ್ಮ ಕುಟುಂಬ ಸದಸ್ಯರ ಗುರುತನ್ನು ದೃಢಪಡಿಸುವ ಅಗತ್ಯವಿರುತ್ತದೆ. ಪ್ರಾಯೋಗಿಕ ಯಶಸ್ಸಿನಿಂದ ಈ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸಲಾಗಿದೆ. ಪರೀಕ್ಷಾರ್ಥ ಪ್ರಕ್ರಿಯೆಗಳಲ್ಲಿ ಸರಾಸರಿ 12 ನಿಮಿಷಗಳಲ್ಲಿ ಆಂಬುಲೆನ್ಸ್ ಸೇವೆ ಲಭ್ಯವಾಗಿದೆ’ ಎಂದು ಹೇಳಿದೆ.

ADVERTISEMENT

ಸ್ವಿಗ್ಗಿಯ ಕಾರ್ಯಾಚರಣೆಗಳ ಮುಖ್ಯಸ್ಥ ಮಿಹಿರ್ ರಾಜೇಶ್ ಶಾ, ‘ಆಹಾರ ವಿತರಣಾ ಪ್ರತಿನಿಧಿಗಳ ಸುರಕ್ಷತೆಗೆ ಸಂಸ್ಥೆ ಬದ್ಧವಾಗಿದೆ. ಆಹಾರ ವಿತರಿಸುವಾಗ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಅವರಿಗೆ ಕ್ಷಿಪ್ರವಾಗಿ ಆರೋಗ್ಯ ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವು ಉಚಿತ ಆಂಬುಲೆನ್ಸ್ ಸೇವೆಗಳನ್ನು ನೀಡುತ್ತಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.