
ಬೆಂಗಳೂರು: ಹಿರಿಯ ನಾಗರಿಕರಿಗಾಗಿ ಉಚಿತ ಉದ್ಯೋಗ ಮೇಳನ್ನು ಸೆ.7ರಂದು ನಗರದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಆರ್ಥಿಕ ಅಭದ್ರತೆಯು ದೇಶದಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ದೊಡ್ಡ ಸವಾಲು. ದೇಶದ ಸುಮಾರು 15 ಕೋಟಿ ಹಿರಿಯ ನಾಗರಿಕರಲ್ಲಿ ಶೇ 75 ರಷ್ಟು ಮಂದಿ ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಇತರರ ಮೇಲೆ ಅವಲಂಬಿತರಾಗಿದ್ದಾರೆ. ಇವರಲ್ಲಿ ಬಹುಪಾಲು ಜನ ಗೌರವಯುತ ಬದುಕಿನಿಂದ ವಂಚಿತರಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನೈಟಿಂಗೇಲ್ ಎಂಪವರ್‌ಮೆಂಟ್ ಫೌಂಡೇಷನ್, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಆರ್ಚ್ ಡಯೋಸಿಸ್ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಪ್ರೇಮ್ ಕುಮಾರ್ ರಾಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಶೇ 11 ರಷ್ಟು ಹಿರಿಯ ನಾಗರಿಕರು ಸರಕಾರಿ ಉದ್ಯೋಗಗಳಿಂದ ನಿವೃತ್ತರಾದವರು. ಅವರಿಗೆ ಪಿಂಚಣಿ ಸೌಲಭ್ಯಗಳಿವೆ. ಉಳಿದ ಶೇ 89ರಷ್ಟು ಹಿರಿಯ ನಾಗರಿಕರು ಪಿಂಚಣಿಯ ಭದ್ರತೆ ಹೊಂದಿಲ್ಲ ಎಂದರು.
ನೈಟಿಂಗೇಲ್ ಎಂಪವರ್‌ಮೆಂಟ್ ಫೌಂಡೇಷನ್ ಹಿರಿಯ ನಾಗರಿಕರಿಗಾಗಿ 9 ಆವೃತ್ತಿಗಳಲ್ಲಿ ವಿಶೇಷ ಉಚಿತ ಉದ್ಯೋಗ ಮೇಳ ನಡೆಸಿತ್ತು. 8,500ಕ್ಕೂ ಹೆಚ್ಚು ಹಿರಿಯ ನಾಗರಿಕರು ನೋಂದಾಯಿಸಿಕೊಂಡಿದ್ದು, 450ಕ್ಕೂ ಹೆಚ್ಚು ಉದ್ಯೋಗದಾತರು, ಕಂಪನಿಗಳು ಉದ್ಯೋಗಾವಕಾಶಗಳನ್ನು ಒದಗಿಸಿವೆ. ಈವರೆಗೂ 3 ಸಾವಿರಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.