ADVERTISEMENT

ಎಲ್ಲಾ ಬಸ್‌ಗಳಿಗೆ ಕೀಟನಾಶಕ ಸಿಂಪಡಣೆ: ಕೆಎಸ್‌ಆರ್‌ಟಿಸಿಯಿಂದ ನಿರಂತರ ಕ್ರಮ

ತಿಗಣೆ, ಜಿರಳೆ ಕಾಟಕ್ಕೆ ಮುಕ್ತಿ ನೀಡಲು ಕ್ರಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 19:47 IST
Last Updated 7 ನವೆಂಬರ್ 2019, 19:47 IST
ಧೂಮೀಕರಣ ಮಾಡಿ ಮುಚ್ಚಿರುವ ಐಷಾರಾಮಿ ಬಸ್‌ಗಳು
ಧೂಮೀಕರಣ ಮಾಡಿ ಮುಚ್ಚಿರುವ ಐಷಾರಾಮಿ ಬಸ್‌ಗಳು   

ಬೆಂಗಳೂರು: ತಿಗಣೆ ಮತ್ತು ಜಿರಳೆ ಕಾಟ ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎಲ್ಲಾ ಬಸ್‌ಗಳಿಗೆ ನಿರಂತರವಾಗಿ ಕೀಟನಾಶಕ ಸಿಂಪಡಣೆ ಮಾಡಲು ನಿರ್ಧರಿಸಿದೆ.

ಈವರೆಗೆ ರಾಜಹಂಸ, ಐರಾವತ, ವೋಲ್ವೊ, ಸ್ಲೀಪರ್‌ ಬಸ್‌ಗಳು ಸೇರಿ ಎಲ್ಲಾ ಐಷಾರಾಮಿ ಬಸ್‌ಗಳಿಗೆ ಮಾತ್ರ ಫ್ಯೂಮಿಗೇಷನ್ (ಧೂಮೀಕರಣ) ಮಾಡಲಾಗುತ್ತಿತ್ತು. ಕರ್ನಾಟಕ ಸಾರಿಗೆ (ಕೆಂಪು ಬಸ್‌) ಬಸ್‌ಗಳಲ್ಲೂ ತಿಗಣೆ ಮತ್ತು ಜಿರಳೆ ಕಾಟ ಇದೆ ಎಂಬ ದೂರುಗಳು ಬಂದ ಕಾರಣ ಈ ಕ್ರಮಕ್ಕೆ ನಿಗಮ ಮುಂದಾಗಿದೆ.

ಐಷಾರಾಮಿ ಬಸ್‌ಗಳಲ್ಲಿ ಫೋಮ್ ಸೀಟುಗಳಿರುವ ಕಾರಣ ತಿಗಣೆ ಮತ್ತು ಜಿರಳೆಗಳೂ ಅವುಗಳನ್ನು ಸುಖಾಸೀನ ಮಾಡಿಕೊಳ್ಳುತ್ತಿದ್ದವು. ಕರ್ನಾಟಕ ಸಾರಿಗೆ ಬಸ್‌ಗಳಲ್ಲಿರುವ ಸೀಟುಗಳಿಗೆ ರೆಗ್ಜಿನ್ ಬಳಸಲಾಗುತ್ತದೆ. ರೆಗ್ಜಿನ್‌ನಲ್ಲಿ ಉಷ್ಣಾಂಶ ಹೆಚ್ಚಾಗುವ ಕಾರಣ ಈ ಕೀಟಗಳು ಅಲ್ಲಿ ನೆಲೆಸುವುದಿಲ್ಲ ಎಂಬುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಅಭಿಪ್ರಾಯ.

ADVERTISEMENT

ಆದರೆ, ಕರ್ನಾಟಕ ಸಾರಿಗೆ ಬಸ್‌ನಲ್ಲೂ ತಿಗಣೆ ಕಾಟ ಇದೆ ಎಂಬ ದೂರುಗಳು ಸಾಮಾಜಿಕ ಜಾಲತಾಣದಲ್ಲಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಉಗ್ರಾಣ ನಿಗಮದ ಮೂಲಕ ಔಷಧಿ ಸಿಂಪರಣೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

‘ಐಷಾರಾಮಿ ಬಸ್‌ಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಉಗ್ರಾಣ ನಿಗಮದ ಮೂಲಕವೇ ಧೂಮೀಕರಣ ಮಾಡಿಸಲಾಗುತ್ತಿದೆ. ಧೂಮೀಕರಣ ಮಾಡಿದ ಬಸ್‌ಗೆ ಹೊದಿಕೆ ಹೊದಿಸಿ ಮೂರು ದಿನಗಳ ಕಾಲ ನಿಲ್ಲಿಸಲಾಗುತ್ತದೆ. ಯಾವುದೇ ರೀತಿಯ ಕೀಟಗಳಿದ್ದರೂ ನಾಶವಾಗುತ್ತವೆ’ ಎಂದು ಅವರು ತಿಳಿಸಿದರು.

‘ನಿಗಮದಲ್ಲಿ ಒಟ್ಟು 8,675 ಬಸ್‌ಗಳಿದ್ದು, ಈ ಪೈಕಿ 850 ಮಾತ್ರ ಐಷಾರಾಮಿ ಬಸ್‌ಗಳು. ಉಳಿ
ದವು ಕರ್ನಾಟಕ ಸಾರಿಗೆ ಬಸ್‌ಗಳು. ನಿಗಮದ ಎಲ್ಲಾ ವಿಭಾಗದ ಡಿಪೋಗಳಲ್ಲೂ ಉಗ್ರಾಣ ನಿಗಮದ ಮೂಲಕವೇ ಔಷಧಿ ಸಿಂಪಡಣೆ ಮಾಡಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಅಂಕಿ–ಅಂಶ
₹ 2,100:ಪ್ರತಿ ಬಸ್‌ ಧೂಮೀಕರಣಕ್ಕೆ ತಗಲುವ ವೆಚ್ಚ
₹ 250:ಪ್ರತಿ ಬಸ್‌ಗೆ ಔಷಧಿ ಸಿಂಪರಣೆ ಮಾಡಲು ತಗಲುವ ವೆಚ್ಚ
₹2.35 ಕೋಟಿ:ನಾಲ್ಕು ವರ್ಷಗಳಲ್ಲಿ ಧೂಮೀಕರಣಕ್ಕೆ ಆಗಿರುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.