
ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯ ಆವಲಹಳ್ಳಿ ಗ್ರಾಮ ಪಂಚಾಯಿತಿ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ.
ವಿವಿಧ ಇಲಾಖೆಗಳಲ್ಲಿನ ಪ್ರಗತಿಯನ್ನು ಪರಿಗಣಿಸಿ ಗ್ರಾಮ ಪಂಚಾಯಿತಿಯನ್ನು 2023-24ನೇ ಸಾಲಿಗೆ ಆಯ್ಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ₹ 5 ಲಕ್ಷ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ. 2021-22 ರಲ್ಲಿಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಈ ಪ್ರಶಸ್ತಿಯನ್ನು ಆವಲಹಳ್ಳಿ ಗ್ರಾಮ ಪಂಚಾಯಿತಿ ಮುಡಿಗೇರಿಸಿಕೊಂಡಿತ್ತು.
ಆವಲಹಳ್ಳಿ ಗ್ರಾಮ ಪಂಚಾಯಿತಿ ಆವಲಹಳ್ಳಿ, ಚೀಮಸಂದ್ರ, ವೀರೇನಹಳ್ಳಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ಕಸ ನಿರ್ವಹಣೆ, ಗ್ರಾಮ ಸಭೆ, ಕರ ನಿರ್ವಹಣೆಯಂತಹ ಮಾದರಿ ಕೆಲಸಗಳನ್ನು ಪರಿಗಣಿಸಿ ಪುರಸ್ಕಾರ ಲಭಿಸಿದೆ.
‘ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಕೆರೆ ಕಟ್ಟೆಗಳ ದಡಗಳಲ್ಲಿ ಗಿಡ ನೇಡುವ ಕಾರ್ಯಕ್ರಮ, ಕೆರೆ, ಚರಂಡಿ ಸ್ವಚ್ಛತೆ, ರಸ್ತೆ ನಿರ್ಮಾಣ, ಸರ್ಕಾರಿ ಕಟ್ಟಡಗಳನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳುವ ಹಲವಾರು ಚಟುವಟಿಕೆ ರೂಪಿಸಿಕೊಂಡಿರುವುದರಿಂದ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದೆ’ ಎಂದು ಅಧ್ಯಕ್ಷೆ ಶಿಲ್ಪಾ ನಾಗರಾಜ್ ಹೇಳಿದರು.
ನರೇಗಾ ಅನುದಾನ ಬಳಕೆ ಸರ್ಕಾರಿ ದಾಖಲೆಗಳ ನಿರ್ವಹಣೆ ಗ್ರಾಮಸಭೆ ಎಸ್ಸಿ ಎಸ್ಟಿ ಹಾಗೂ ವಿಶೇಷ ಚೇತನರಿಗೆ ಅಗತ್ಯ ಸೌಕರ್ಯ ಒದಗಿಸಿ ಜನ ಜೀವನ ಮಟ್ಟ ಸುಧಾರಣೆಗೆ ಪಂಚಾಯಿತಿ ಶ್ರಮಿಸಿದೆ.ವಸಂತ್ ಕುಮಾರ್ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.