ADVERTISEMENT

ಕೋವಿಡ್ ‘ವಿಘ್ನ’: ಸಣ್ಣ ಮೂರ್ತಿ ತಯಾರಿಗೆ ನಿರ್ಧಾರ -ಕಲಾವಿದರು

ಸಾರ್ವಜನಿಕ ಆಚರಣೆಗೆ ನಿಷೇಧ * ಮೂರ್ತಿ ತಯಾರಕರ ಲಾಭದ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 3:27 IST
Last Updated 18 ಆಗಸ್ಟ್ 2021, 3:27 IST
ಹನುಮಂತನಗರದ ಮಳಿಗೆಯೊಂದರಲ್ಲಿ ಗಣೇಶನ ಮಣ್ಣಿನ ಮೂರ್ತಿಗಳಿಗೆ ಕಲಾವಿದರು ಮಂಗಳವಾರ ಅಂತಿಮ ಸ್ಪರ್ಶ ನೀಡಿದರು -ಪ್ರಜಾವಾಣಿ ಚಿತ್ರ/ ರಂಜು ಪಿ
ಹನುಮಂತನಗರದ ಮಳಿಗೆಯೊಂದರಲ್ಲಿ ಗಣೇಶನ ಮಣ್ಣಿನ ಮೂರ್ತಿಗಳಿಗೆ ಕಲಾವಿದರು ಮಂಗಳವಾರ ಅಂತಿಮ ಸ್ಪರ್ಶ ನೀಡಿದರು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಈ ಬಾರಿಯೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿ, ಮನೆಗಳಲ್ಲಿ ಸರಳವಾಗಿ ಆಚರಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿರುವುದರಿಂದ ಗಣೇಶ ಮೂರ್ತಿ ತಯಾರಕರು ಸಣ್ಣ ಗಾತ್ರದ ಮಣ್ಣಿನ ಮೂರ್ತಿಗಳ ತಯಾರಿಗೆ ಮುಂದಾಗಿದ್ದಾರೆ.

ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮಾರ್ಗಸೂಚಿ ಹೊರಡಿಸಿರುವುದರಿಂದ ಕಲಾವಿದರು ಕಂಗಾಲಾಗಿದ್ದರು. ಈ ವರ್ಷ ಸಿದ್ಧಪಡಿಸಿದ್ದ ಗಣೇಶನ ಬೃಹತ್ ಮೂರ್ತಿಗಳು ಗೋದಾಮುಗಳಲ್ಲೇ ಉಳಿದಿವೆ.

ಆದರೆ, ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿರುವುದರಿಂದ ಸಣ್ಣ ಗಾತ್ರದ ಗಣೇಶ ಮೂರ್ತಿಗಳನ್ನು ಗ್ರಾಹಕರು ಖರೀದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಲಾವಿದರು ಸಣ್ಣ ಮೂರ್ತಿಗಳ ತಯಾರಿಯಲ್ಲಿ ತೊಡಗಿದ್ದಾರೆ.

ADVERTISEMENT

‘ಕಳೆದ ಮಾರ್ಚ್‌ ಅವಧಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರಿಂದ ಎಂದಿನಂತೆ ಗಣೇಶ ಮೂರ್ತಿಗಳ ತಯಾರಿ ಆರಂಭಿಸಿದೆವು. ಅಷ್ಟರಲ್ಲಿ ಎರಡನೇ ಅಲೆ ಬಂತು. ಮೂರನೇ ಅಲೆಯ ನಿರೀಕ್ಷೆಯ ಬಗ್ಗೆ ತಜ್ಞರು ಆಗಲೇ ಎಚ್ಚರಿಸಿದ್ದರಿಂದ ಮುಂದಾಲೋಚನೆಯಿಂದ ದೊಡ್ಡ ಗಾತ್ರದ ಮಣ್ಣಿನ ಮೂರ್ತಿಗಳ ಬದಲಿಗೆ ಮಧ್ಯಮ ಗಾತ್ರದವರೆಗಿನ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ’ ಎಂದುಹನುಮಂತನಗರದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕಲಾವಿದೆ ಭಾಗ್ಯ ತಿಳಿಸಿದರು.

‘ಕೋವಿಡ್‌ ಇನ್ನೂ ನಿಯಂತ್ರಣಕ್ಕೆ ಬರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ಮನೆಗಳಲ್ಲಿ ಪ್ರತಿಷ್ಠಾಪಿಸಲು ಸಣ್ಣ ಮೂರ್ತಿಗಳನ್ನು ಗ್ರಾಹಕರು ಖರೀದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ 4 ಸಾವಿರ ಸಣ್ಣ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಈ ಬಾರಿ ಗ್ರಾಹಕರೇ ನಮ್ಮ ಕೈಹಿಡಿಯಬೇಕು’ ಎಂದರು.

‘ಕಳೆದ ವರ್ಷ ಗಣೇಶ ಚತುರ್ಥಿಗೆ ಕೋವಿಡ್ ಅಡ್ಡಿಪಡಿಸಿತು. ಸಿದ್ಧಪಡಿಸಿದ್ದ ಗಣೇಶ ಮೂರ್ತಿಗಳು ಖರೀದಿಯಾಗದೆ, ನಷ್ಟ ಅನುಭವಿಸಿದೆವು. ಈ ವರ್ಷದ ಹಬ್ಬಕ್ಕೂ ಮೂರನೇ ಅಲೆಯ ಕರಿನೆರಳು ಬಿದ್ದಿದೆ. ಈಗಾಗಲೇ ತಯಾರಿಸಿರುವ ದೊಡ್ಡ ಮೂರ್ತಿಗಳನ್ನು ಏನು ಮಾಡುವುದು‘ ಎನ್ನುತ್ತಾರೆ ಜಕ್ಕೂರಿನ ಗಣೇಶ ಮೂರ್ತಿ ತಯಾರಕ ಮಹೇಶ್‌ ಕುಮಾರ್.

‘ಪ್ರತಿ ವರ್ಷ ₹2 ಲಕ್ಷದವರೆಗೆ ಬಂಡವಾಳ ಹಾಕಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತೇವೆ. ಬಂಡವಾಳದ ಶೇ 20ರಷ್ಟು ಲಾಭ ಮಾತ್ರ ನಮ್ಮ ಕೈಸೇರುತ್ತದೆ. ಸಾಲ ಮಾಡಿ ಕೆಲಸಕ್ಕೆ ಕೈ ಹಾಕುತ್ತೇವೆ. ಕಳೆದ ವರ್ಷದ ಸಾಲದ ಹೊರೆ ಇನ್ನೂ ತೀರಿಲ್ಲ. ಈ ವರ್ಷವಾದರೂ ಲಾಭ ಸಿಗಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.