ADVERTISEMENT

ಗಾಂಜಾ ಮಾರಾಟ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:05 IST
Last Updated 13 ಫೆಬ್ರುವರಿ 2019, 20:05 IST

ಬೆಂಗಳೂರು: ಕಾಲೇಜುಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯದ ಜುನೇದ್‌ ಅಹ್ಮದ್‌ ಮತ್ತು ಕೇರಳದ ನೀಲಕಂಠನ್‌ ಬಂಧಿತರು. ಆರೋಪಿಗಳಿಂದ ₹ 6.5 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾ, ಎಲ್‌ಎಸ್‌ಡಿ 30 ಗ್ರಾಂ., ಎರಡು ಮೊಬೈಲ್‌ ಮತ್ತು ಬೈಕ್‌ವೊಂದನ್ನು ವಶಪಡಿಸಿಕೊಂಡಿದ್ದಾರೆ.‌‌

ಆರೋಪಿ ನೀಲಕಂಠನ್‌ ಪ್ರತಿಷ್ಠಿತ ಕಾಲೇಜೊಂದರಲ್ಲಿ ದ್ವಿತೀಯ ವರ್ಷ ಬಿಬಿಎ ಪದವಿ ಓದುತ್ತಿದ್ದು, ಜುನೇದ್‌ ಅಹ್ಮದ್‌ ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಗಾಂಜಾ ಮಾರಾಟ ಮಾಡುತ್ತಿದ್ದ.

ADVERTISEMENT

ಆಂಧ್ರಪ್ರದೇಶದ ಕರ್ನೂಲ್‌ನಿಂದ ಗಾಂಜಾ ತರಿಸಿಕೊಂಡು ಕೋರಮಂಗಲ, ಮಾರತ್ತಹಳ್ಳಿ, ಬನ್ನೇರುಘಟ್ಟಗಳ ಪ್ರತಿಷ್ಠಿತ ಕಾಲೇಜುಗಳಲ್ಲಿ ಮಾರುತ್ತಿದ್ದರು. ಆರೋಪಿ ಜುನೈದ್‌ ನಾಲ್ಕು ವರ್ಷಗಳ ಹಿಂದೆಯೇ ಗಾಂಜಾ ಮಾರಾಟದಲ್ಲಿ ತೊಡಗಿದ್ದ. ಕಳೆದ ವರ್ಷ ಆತನನ್ನು ಮೈಕೋ ಲೇಔಟ್‌ ಪೊಲೀಸರು ಬಂಧಿಸಿದ್ದರು. ಡಿಸೆಂಬರ್‌ನಲ್ಲಿ ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ಗಾಂಜಾ ಮಾರಾಟ ಕೃತ್ಯಕ್ಕಿಳಿದಿದ್ದ.

‘ಆರೋಪಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಕರ್ನೂಲ್‌ ವ್ಯಕ್ತಿಯ ಮಾಹಿತಿಯೂ ಸಿಕ್ಕಿದ್ದು, ಆತನನ್ನು ಶೀಘ್ರವೇ ವಶಕ್ಕೆ ಪಡೆದುಕೊಳ್ಳುತ್ತೇವೆ. ಸುದ್ದಗುಂಟೆಪಾಳ್ಯದ ಮುಖ್ಯರಸ್ತೆಯ ಶ್ರೀನಿವಾಸ ಚಿತ್ರಮಂದಿರದ ಬಳಿ ಗಾಂಜಾ ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.