ADVERTISEMENT

ಕಸ ಸಂಸ್ಕರಣೆ– ಪೂರ್ಣ ಫಲ ಇನ್ನೂ ಮರೀಚಿಕೆ

ಹೈಕೋರ್ಟ್ ಸೂಚಿಸಿದರೂ ಸುಧಾರಿಸದ ಪರಿಸ್ಥಿತಿ l ಭೂಭರ್ತಿ ಘಟಕಗಳಲ್ಲಿ ತ್ಯಾಜ್ಯದ ಬೆಟ್ಟ ಸೃಷ್ಟಿ

ಭೀಮಣ್ಣ ಮಾದೆ
Published 20 ಮಾರ್ಚ್ 2019, 20:16 IST
Last Updated 20 ಮಾರ್ಚ್ 2019, 20:16 IST
ಕೂಡ್ಲು ಕಸ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ
ಕೂಡ್ಲು ಕಸ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ   

ಬೆಂಗಳೂರು: ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಸಲುವಾಗಿ ನಿರ್ಮಿಸಿರುವ ಏಳು ಕಸ ಸಂಸ್ಕರಣಾ ಘಟಕಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ನಗರದಲ್ಲಿ ಉತ್ಪತ್ತಿಯಾಗುವ ಬಹುತೇಕ ಕಸ ನೇರವಾಗಿ ಭೂಭರ್ತಿ ಘಟಕಗಳನ್ನು ಸೇರುತ್ತಿದ್ದು ಅಲ್ಲಿ ತ್ಯಾಜ್ಯದ ಬೆಟ್ಟವೇ ನಿರ್ಮಾಣವಾಗುತ್ತಿದೆ.

ಕಸ ಸಂಸ್ಕರಣಾ ಘಟಕಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವಂತೆ ಹೈಕೋರ್ಟ್‌ ಪಾಲಿಕೆಯ ಕಿವಿ ಹಿಂಡಿದರೂ ಪರಿಸ್ಥಿತಿ ಸುಧಾರಿಸಿಲ್ಲ. ಮೂಲದಲ್ಲೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುವ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ ತ್ಯಾಜ್ಯ ಸಂಸ್ಕರಣೆಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು

ನಗರದಲ್ಲಿ ದಿನನಿತ್ಯ 4,200 ಟನ್‌ ಹಸಿ ಕಸ ಸೇರಿದಂತೆ ಒಟ್ಟು 5,760 ಟನ್‌ ಕಸ ಉತ್ಪತ್ತಿಯಾಗುತ್ತದೆ. ಇದರಲ್ಲಿ ಮಿಶ್ರಕಸದ್ದೇ ಸಿಂಹಪಾಲು. 1,400 ಟನ್ ಕಸ ಮಾತ್ರ ವಿಂಗಡನೆಯಾಗುತ್ತಿದ್ದು, ಅದನ್ನು ಮಾತ್ರ ಪಾಲಿಕೆಯು ಸಂಸ್ಕರಣಾ ಘಟಕಗಳಿಗೆ ಕಳುಹಿಸುತ್ತಿದೆ. ಏಳು ಘಟಕಗಳಲ್ಲಿ 450 ಟನ್‌ ಕಸ ಮಾತ್ರ ಸಂಸ್ಕರಣೆಯಾಗುತ್ತಿದೆ. ಮಿಶ್ರಕಸ ನೇರವಾಗಿ ಭೂಭರ್ತಿ ಘಟಕಗಳನ್ನು ಸೇರುತ್ತಿದೆ.

ADVERTISEMENT

ನಿತ್ಯ 1,800 ಟನ್‌ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಮರ್ಥ್ಯದ ಆರು ಘಟಕಗಳನ್ನು ನಗರದ ಕನ್ನಹಳ್ಳಿ, ಸೀಗೆಹಳ್ಳಿ, ಚಿಕ್ಕನಾಗಮಂಗಲ, ಕುಂಬಳಗೋಡು, ಲಿಂಗದೀರಹಳ್ಳಿ ಮತ್ತು ದೊಡ್ಡಬಿದರಕಲ್ಲಿನಲ್ಲಿ 2016ರಲ್ಲಿ ಸ್ಥಾಪಿಸಲಾಗಿತ್ತು. ₹440 ಕೋಟಿ ವೆಚ್ಚದಲ್ಲಿ ಸ್ಥಾಪಿಸಿದ್ದ ಈ ಘಟಕಗಳು ಶೇ35ರಷ್ಟು ಕಸವನ್ನು ಮಾತ್ರ ಸಂಸ್ಕರಿಸುತ್ತಿವೆ.

ಕೂಡ್ಲು ಬಳಿ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮವು (ಕೆಸಿಡಿಸಿ) ಕಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದೆ. 30 ಎಕರೆ ಪ್ರದೇಶದಲ್ಲಿ ಹರಡಿರುವ ಈ ಘಟಕವು ನಿತ್ಯ 500 ಟನ್‌ಗಳಷ್ಟು ಕಸ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇಲ್ಲಿ ನಿತ್ಯ ಸಂಸ್ಕರಣೆ ಆಗುತ್ತಿರುವುದು ಸರಾಸರಿ 300 ಟನ್‌ ಕಸ ಮಾತ್ರ.

‘ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಲಾದ ಕಸ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಪ್ರತಿನಿತ್ಯ ಉತ್ಪತ್ತಿಯಾಗುವ ಕಸದಲ್ಲಿ ಅಲ್ಪಪ್ರಮಾಣದ ಕಸ ಮಾತ್ರ ಸಂಸ್ಕರಣೆಯಾಗುತ್ತದೆ. ಮಿಶ್ರಕಸ ಸಂಸ್ಕರಣೆ ಘಟಕದ ಹತ್ತಿರ ಹೋದರೆ ವಾಸನೆ ತಾಳದೆ ಜನಜಗಳ ಕಾಯುತ್ತಾರೆ’ ಎಂದುಘನತ್ಯಾಜ್ಯ ನಿರ್ವಹಣಾ ರೌಂಡ್‌ಟೇಬಲ್ ಸಂಸ್ಥೆಯ ಅಧ್ಯಕ್ಷ ಎನ್‌.ಎಸ್.ರಮಾಕಾಂತ್‌ ಸಮಸ್ಯೆಯನ್ನು ವಿವರಿಸಿದರು.

‘ಸಂಸ್ಕರಣಾ ಘಟಕಗಳನ್ನು ಸೇರುವ ಮಿಶ್ರಕಸ ದುರ್ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ಈ ಘಟಕಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸುತ್ತಾರೆ. ಅನೇಕ ಕಡೆಗಳಲ್ಲಿ ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ. ಸಾರ್ವಜನಿಕರು ಆಸ್ಥೆ ವಹಿಸಿ ಮನೆಯಲ್ಲೇ ಹಸಿ ಮತ್ತು ಒಣ ಕಸ ಬೇರ್ಪಡಿಸಿದರೆ, ಈ ಸಮಸ್ಯೆ ನಿವಾರಣೆಯಾಗಲಿದೆ. ಆಗ ಎಲ್ಲ ಘಟಕಗಳೂ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.