ADVERTISEMENT

ಮಗ–ಸೊಸೆ ನಿರ್ಲಕ್ಷ್ಯ: ದಂ‍ಪತಿ ಆತ್ಮಹತ್ಯೆ

ಹಾಸಿಗೆ ಹಿಡಿದಿದ್ದ ಪತ್ನಿಗೆ ಪತಿಯದೇ ಆರೈಕೆ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 20:05 IST
Last Updated 24 ಆಗಸ್ಟ್ 2019, 20:05 IST
   

ಬೆಂಗಳೂರು: ‘ಮಗ ಮತ್ತು ಸೊಸೆ ನಿರ್ಲಕ್ಷ್ಯದಿಂದ ಬೇಸತ್ತಿದ್ದರು’ ಎನ್ನಲಾದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಿರಿನಗರದಲ್ಲಿ ನಡೆದಿದೆ.

ಬಿಇಎಲ್ ನಿವೃತ್ತ ನೌಕರ ಕೃಷ್ಣಮೂರ್ತಿ (70) ಹಾಗೂ ಅವರ ಪತ್ನಿ ಸ್ವರ್ಣಾ (68) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪದಡಿ ಮಗ– ಸೊಸೆ ವಿರುದ್ಧ ಪ್ರಕರಣ ದಾಖಲಾಗಿದೆ.

‘ಮಗ ಮಂಜುನಾಥ್– ಸೊಸೆ ಸ್ನೇಹಾ ಜೊತೆ ಗಿರಿನಗರ 4ನೇ ಹಂತದ 2ನೇ ಮುಖ್ಯರಸ್ತೆಯ ಮನೆಯಲ್ಲಿ ದಂಪತಿ ವಾಸವಿದ್ದರು. ದಂಪತಿಗೆ ಮಗಳಿದ್ದು, ಮದುವೆ ಮಾಡಿಕೊಡಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬೆನ್ನು ಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ ಸ್ವರ್ಣಾ, ಒಂದೂವರೆ ವರ್ಷದಿಂದಲೂ ಹಾಸಿಗೆ ಹಿಡಿದಿದ್ದರು. ಪತ್ನಿಯ ಸ್ಥಿತಿ ಕಂಡು ಕೃಷ್ಣಮೂರ್ತಿ ನೊಂದಿದ್ದರು’ ಎಂದು ತಿಳಿಸಿದರು.

‘ಶುಕ್ರವಾರ ಬೆಳಿಗ್ಗೆ ಮಗ– ಸೊಸೆ ಕೆಲಸಕ್ಕೆ ಹೋಗಿದ್ದರು. ಸಂಜೆ ವೇಳೆಗೆ ದಂಪತಿ, ವಿಷ ಕುಡಿದಿದ್ದರು. ಸ್ವರ್ಣಾ ಹಾಸಿಗೆಯಲ್ಲೇ ಪ್ರಜ್ಞೆ ತಪ್ಪಿದ್ದರು. ಕೃಷ್ಣಮೂರ್ತಿ ವಿಷ ಕುಡಿದ ಬಳಿಕ ನೇಣು ಹಾಕಿಕೊಂಡಿದ್ದಾರೆ. ಈ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

‘ರಾತ್ರಿ 8ರ ಸುಮಾರಿಗೆ ಮಗ– ಸೊಸೆ ಮನೆಗೆ ಮರಳಿದ್ದರು. ಕರೆಗಂಟೆಯನ್ನು ಎಷ್ಟೇ ಒತ್ತಿದ್ದರೂ ಬಾಗಿಲು ತೆರೆದಿರಲಿಲ್ಲ. ಕಿಟಕಿಯಲ್ಲಿ ನೋಡಿದಾಗ, ಕೃತ್ಯ ಗೊತ್ತಾಗಿದೆ. ಅವಾಗಲೇ ಮಗ, ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಬಾಗಿಲು ಮುರಿದು ಒಳಗೆ ಪ್ರವೇಶಿಸುವ ವೇಳೆಗೆ ಕೃಷ್ಣಮೂರ್ತಿ ಮೃತಪಟ್ಟಿದ್ದರು. ಸ್ವರ್ಣ ಅವರು ಉಸಿರಾಡುತ್ತಿದ್ದುದ್ದು ಗಮನಕ್ಕೆ ಬಂದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ ಅವರು ಸಹ ಅಸುನೀಗಿದರು’ ಎಂದು ಮಾಹಿತಿ ನೀಡಿದರು.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು: ‘ಮಗ– ಸೊಸೆ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ಐದು ವರ್ಷದ ಮಗನಿದ್ದಾನೆ. ಇಬ್ಬರೂ ಬೆಳಿಗ್ಗೆ 6ಗಂಟೆಗೆ ಕೆಲಸಕ್ಕೆ ಹೋದರೆ ರಾತ್ರಿ 8ಕ್ಕೆ ಬರು ತ್ತಿದ್ದರು. ಸ್ನೇಹಾ, ತನ್ನ ತವರು ಮನೆಯಲ್ಲೇ ಮಗನನ್ನೂ ಬಿಟ್ಟು ಹೋಗುತ್ತಿದ್ದರು. ಮಾವ– ಅತ್ತೆ ಜೊತೆ ಸಮಯ ಕಳೆಯುತ್ತಿರಲಿಲ್ಲ. ಅದರಿಂದಲೂ ದಂಪತಿ ನೊಂದಿದ್ದರು’ ಎಂದರು.

‘ನರಕದಿಂದ ಸ್ವರ್ಗದ ಕಡೆಗೆ...’

‘ಕೃಷ್ಣಮೂರ್ತಿ ದಂಪತಿ ಬರೆದಿದ್ದಾರೆ ಎನ್ನಲಾದ ಮರಣ ಪತ್ರ ಮನೆಯಲ್ಲಿ ಸಿಕ್ಕಿದೆ. ‘ನರಕದಿಂದ ಸ್ವರ್ಗದ ಕಡೆಗೆ ಹೊರಟಿದ್ದೇವೆ. ನಮ್ಮ ಸಾವಿಗೆ ಮಗ–ಸೊಸೆಯೇ ಕಾರಣ’ ಎಂದು ಅದರಲ್ಲಿ ಬರೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸ್ವರ್ಣಾ ಅವರಿಗೆ ಹಾಸಿಗೆಯಿಂದ ಮೇಲೇಳಲು ಆಗುತ್ತಿರಲಿಲ್ಲ. ನಿತ್ಯಕರ್ಮಗಳನ್ನೆಲ್ಲ ಪತಿ ಕೃಷ್ಣಮೂರ್ತಿ ಅವರೇ ಮಾಡಿಸುತ್ತಿದ್ದರು. ಪತ್ನಿ ಬಳಿಯೇ ಇದ್ದು ಆರೈಕೆ ಮಾಡುತ್ತಿದ್ದರು. ಮನೆಯಿಂದ ಹೊರಹೋಗಲೂ ಆಗುತ್ತಿರಲಿಲ್ಲ. ಮಗ–ಸೊಸೆ ಸಹ ನಿರ್ಲಕ್ಷ್ಯ ವಹಿಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.