ADVERTISEMENT

ಲಂಚಾವತಾರದಿಂದ ಲಿಂಚಾವತಾರಕ್ಕೆ...

ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಗಿರೀಶ ಕಾರ್ನಾಡ ಬೇಸರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:29 IST
Last Updated 2 ಸೆಪ್ಟೆಂಬರ್ 2018, 19:29 IST
ಸಮ್ಮೇಳನವನ್ನು ಸಂಗಪ್ಪ ಮಂಟೆ ಉದ್ಘಾಟಿಸಿದರು. ಸಾಹಿತಿಗಳಾದ ಬೊಳುವಾರು ಮಹಮ್ಮದ್‌ ಕುಂಞಿ, ಮೂಡ್ನಾಕೂಡು ಚಿನ್ನಸ್ವಾಮಿ, ಗಿರೀಶ ಕಾರ್ನಾಡ, ಮರುಳ ಸಿದ್ದಪ್ಪ, ರಾಮಚಂದ್ರ ಗುಹಾ, ಗೀತಾ ಹರಿಹರನ್‌, ಪ್ರಸನ್ನ, ಎಂ.ಎಸ್‌.ಸತ್ಯು ಇದ್ದರು –ಪ್ರಜಾವಾಣಿ ಚಿತ್ರ
ಸಮ್ಮೇಳನವನ್ನು ಸಂಗಪ್ಪ ಮಂಟೆ ಉದ್ಘಾಟಿಸಿದರು. ಸಾಹಿತಿಗಳಾದ ಬೊಳುವಾರು ಮಹಮ್ಮದ್‌ ಕುಂಞಿ, ಮೂಡ್ನಾಕೂಡು ಚಿನ್ನಸ್ವಾಮಿ, ಗಿರೀಶ ಕಾರ್ನಾಡ, ಮರುಳ ಸಿದ್ದಪ್ಪ, ರಾಮಚಂದ್ರ ಗುಹಾ, ಗೀತಾ ಹರಿಹರನ್‌, ಪ್ರಸನ್ನ, ಎಂ.ಎಸ್‌.ಸತ್ಯು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೊದಲು ಲಂಚಾವತಾರದ ಬಗ್ಗೆ ಮಾತನಾಡುತ್ತಿದ್ದೆವು. ಈಗ ಲಿಂಚಾವತಾರ (Lynch- ಕಾನೂನುಬಾಹಿರವಾಗಿ ಶಿಕ್ಷೆ ನೀಡುವುದು, ಗಲ್ಲಿಗೇರಿಸುವುದು, ಸಾಮೂಹಿಕ ಹಲ್ಲೆ ನಡೆಸುವುದು) ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿದೆ. ಇಂಥ ಅಸಂಬದ್ಧತೆಗಳ ಹಿಂದೆ ಚುನಾಯಿತ ಪ್ರತಿನಿಧಿಗಳು ಮೆರೆಯುತ್ತಿದ್ದಾರೆ’ ಎಂದು ಸಾಹಿತಿ ಗಿರೀಶ ಕಾರ್ನಾಡ ಬೇಸರ ವ್ಯಕ್ತಪಡಿಸಿದರು.

ಗ್ರಾಮ ಸೇವಾ ಸಂಘ, ದಕ್ಷಿಣಾಯನದ ವತಿಯಿಂದ ನಗರದ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ ಭಾನುವಾರ ನಡೆದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಜನಸಾಮಾನ್ಯನ ಧ್ವನಿಯ ಮೇಲೆ ಅಧಿಕಾರ ಕೇಂದ್ರದಲ್ಲಿರುವವರು ಅಲಕ್ಷ್ಯ ವಹಿಸುತ್ತಿದ್ದಾರೆ. ಇಂಥವರಿಂದ ಲೇಖಕರ ಬಂಧನದಂತಹ ಅಸಹಜ ಘಟನೆ
ಗಳು ನಡೆಯುತ್ತಿವೆ. ನಾವು ಇದನ್ನೆಲ್ಲಾ ಪ್ರಜ್ಞಾಪೂರ್ವಕವಾಗಿ ವಿರೋಧಿಸಬೇಕು’ ಎಂದು ಅವರು ಹೇಳಿದರು.

ADVERTISEMENT

ಅರ್ಥ ಮದ, ಕುಲ ಮದವನ್ನು ಅಧಿಕಾರ ಮದದ ಮೂಲಕ ಜನಸಾಮಾನ್ಯರ ಮೇಲೆ ಹೇರುವಿಕೆ, ಜನಸಾಮಾನ್ಯನ ಧ್ವನಿಯನ್ನು ಕಡೆಗಣಿಸುವ ಅಧಿಕಾರದ ಶಕ್ತಿಗಳು, ಕೋಮುವಾದಿಗಳಿಂದ ಮುಂದುವರಿದಿರುವ ಫ್ಯಾಸಿಸ್ಟ್‌ ಧೋರಣೆ... ಇತ್ಯಾದಿಗೆ ಸಮ್ಮೇಳನದಲ್ಲಿ ತೀವ್ರ ಖಂಡನೆ ವ್ಯಕ್ತವಾಯಿತು. ವಿದ್ಯಾರ್ಥಿಗಳು, ಯುವಜನರು, ಕಲಾವಿದರು, ಹಿರಿಯ ಲೇಖಕರು ಅಸಹಿಷ್ಣುತೆ, ಧ್ವನಿ ಹತ್ತಿಕ್ಕುವ ಪ್ರಯತ್ನಗಳಿಗೆ ಮಾತು, ಹಾಡುಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು.

ಅಸಹಿಷ್ಣುತೆಯಷ್ಟೇ ಪ್ರಧಾನವಾಗಿ ಜಾತಿ ವ್ಯವಸ್ಥೆಯ ಅಸಮಾನತೆ, ತುಳಿತಕ್ಕೊಳಗಾದವರ ನೋವು ಕುರಿತ ಚರ್ಚೆಗಳೂ ಮುನ್ನೆಲೆಗೆ ಬಂದವು. ನಮಗೆ ಮನುವಿನ ಹಿಂದುತ್ವ ಬೇಡ. ವಿವೇಕಾನಂದರು ಅನುಸರಿಸಿದ ಹಿಂದುತ್ವ ಬೇಕು ಎಂಬ ಧ್ವನಿಯೂ ಕೇಳಿಬಂದಿತು.

ಯಾದಗಿರಿ ಜಿಲ್ಲೆಯ ಕೊಡೇಕಲ್‌ನ ಸ್ವಾತಂತ್ರ್ಯ ಹೋರಾಟಗಾರ, ನೇಕಾರ ಸಂಗಪ್ಪ ಮಂಟೆ ಅವರು ಸಮ್ಮೇಳನ ಉದ್ಘಾಟಿಸಿದರು.

ಪ್ರಾಸ್ತಾವಿಕ ಮಾತನಾಡಿದ ರಂಗಕರ್ಮಿ ಪ್ರಸನ್ನ, ‘ಅಸಹಿಷ್ಣುತೆ ತಡೆಯುವಲ್ಲಿ ಧಾರ್ಮಿಕತೆ ಸೋತಿದೆ. ವೈಚಾರಿಕ ಮಾತುಗಳನ್ನಾಡಲು ಹೋದರೆ ಅವನನ್ನು ದೈವ ವಿರೋಧಿ ಎನ್ನಲಾಗುತ್ತದೆ. ವೈಚಾರಿಕತೆ ಇರುವ ಆಧುನಿಕತೆಯನ್ನು ಒಪ್ಪಬೇಕು. ಶ್ರಮದ ಬದುಕನ್ನು ಪರಿಚಯಿಸಿದ ಸಂತರ ತತ್ವವನ್ನು ತೆಗೆದುಕೊಳ್ಳಬೇಕು. ಸಾಹಿತಿ, ಕಲಾವಿದರು ಆತಂಕದಿಂದ ಬರೆದರೆ ಸಹಿಷ್ಣುತೆ ತರಲು ಸಾಧ್ಯವಾಗದು. ಸಂತೋಷದಿಂದ ಬರೆಯುವ ಮುಕ್ತ ವಾತಾವರಣ ಇರಬೇಕು’ ಎಂದು ಆಶಿಸಿದರು.

ಚಿಂತಕ ಸಿದ್ದನಗೌಡ ಪಾಟೀಲ ಮಾತನಾಡಿ, ‘ಭಯದ ಕಾರಣದಿಂದ ಎಲ್ಲ ಎಡಪಂಥದ ಚಿಂತಕರು ಒಟ್ಟಾಗಿದ್ದೇವೆ. ಇದು ಭಯದಿಂದ ಬಂದ ಏಕತೆಯಾದರೂ ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಒಗ್ಗಟ್ಟಾಗಿದ್ದೇವೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಹೇಳಬೇಕು. ಸಮ ಸಮಾಜದ ಕನಸು ನನಸಾಗಬೇಕಿದೆ. ಮತೀಯರನ್ನು ಮತಾಂಧರಿಂದ ದೂರ ಮಾಡಬೇಕಿದೆ. ಮತೀಯತೆ ಬೇರೆ. ಮತಾಂಧತೆ ಬೇರೆ. ಗೋಡ್ಸೆಯನ್ನು ದೇಶಪ್ರೇಮಿಯಾಗಿ ಚಿತ್ರಿಸಲಾಗುತ್ತಿದೆ. ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರನ್ನು ದೇಶದ್ರೋಹಿಗಳೆಂಬಂತೆ ನೋಡಲಾಗುತ್ತಿದೆ’ ಎಂದು ಬೇಸರಿಸಿದರು.

ನಿಲುವಳಿಗಳು: ಸಮ್ಮೇಳನದ ನಿಲುವಳಿಗಳನ್ನು ಲೇಖಕರು ವಾಚಿಸಿ ತಮಗೆ ತಾವೇ ಅನ್ವಯಿಸಿಕೊಳ್ಳುವುದಾಗಿ ಹೇಳಿದರು.

ಜಾತ್ಯತೀತವಾದ, ರಾಷ್ಟ್ರೀಯತೆ, ಲೇಖಕ ಕಲಾವಿದರ ಜವಾಬ್ದಾರಿ, ವಸುಧಾ ಏವ ಕುಟುಂಬಕಂ ಎಂಬ ಜೀವಪರ ಆಶಯವುಳ್ಳ ನಾಲ್ಕು ನಿಲುವಳಿಗಳನ್ನು ಘೋಷಿಸಲಾಯಿತು.

ಯಾರು ಏನೆಂದರು?

ಗಾಂಧಿ ಮತ್ತು ಅಂಬೇಡ್ಕರ್‌ ಒಂದೇ ವಿಷಯಕ್ಕಾಗಿ ಒಟ್ಟಾಗಿ ಕೆಲಸ ಮಾಡಿದವರು. ಅವರನ್ನು ಬೇರೆ ಬೇರೆ ಎಂಬಂತೆ ನೋಡು
ವುದು ಸಲ್ಲದು. ಧರ್ಮದಲ್ಲಿ ಭಕ್ತಿ ಸೇರಿ ಮುಕ್ತಿಯ ದಾರಿ ಇತ್ತು. ಆದರೆ, ಇಂದು ಭಕ್ತಿಯು ರಾಜಕೀಯದಲ್ಲಿ ಸೇರಿ ಸರ್ವಾಧಿ
ಕಾರಿ ಧೋರಣೆಯತ್ತ ಸಾಗುತ್ತಿದೆ.

ರಾಮಚಂದ್ರ ಗುಹಾ,ಲೇಖಕ

2019ರ ಚುನಾವಣೆಬಹಳ ಮುಖ್ಯವಾದದ್ದು. ಸಂವಿಧಾನದ ಮೌಲ್ಯಗಳ ರಕ್ಷಣೆ ಈ ಚುನಾವಣೆ ಮೇಲೆ ನಿಂತಿದೆ. ಆದ್ದರಿಂದ ಎಚ್ಚರವಿರಬೇಕು. ಹಿಂದಿನ ಸರ್ಕಾರ ಅನ್ನಭಾಗ್ಯ ಕೊಟ್ಟಾಗ ನಾನು ಬಡವರಿಗೆ
ಅನ್ನ ಭಾಗ್ಯ, ಸಾಹಿತಿಗಳಿಗೆ ಗನ್‌ಭಾಗ್ಯ ಎಂದು ಹೇಳಿದ್ದೆ. ಹೀಗೆ ಭದ್ರತೆ ಒದಗಿಸುವ ಮೂಲಕ ಸಾಹಿತಿಗಳ ಮಹತ್ವ ಹೆಚ್ಚಾದಂತಾಗಿದೆ.

ಚಂದ್ರಶೇಖರ ಪಾಟೀಲ,ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.