ADVERTISEMENT

ಕೃಷಿ ಮೇಳ: ಹಳದಿ ಸುಂದರಿ ಫೋಟೊಗೆ ಪೈಪೋಟಿ

ಐದು ಎಕರೆ ಪ್ರದೇಶದಲ್ಲಿ ಬೆಳೆ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 19:56 IST
Last Updated 18 ನವೆಂಬರ್ 2023, 19:56 IST
ಜಿಕೆವಿಕೆ ಕೃಷಿ ಮೇಳದಲ್ಲಿ ಮಣ್ಣು ರಹಿತ ಬೇಸಾಯ ಪದ್ಧತಿ ಮೂಲಕ ಬೆಳೆಯಲಾಗಿರುವ ಲಿಸಿಯಾಂತಸ್‌ ಹೈಬ್ರಿಡ್‌
ಜಿಕೆವಿಕೆ ಕೃಷಿ ಮೇಳದಲ್ಲಿ ಮಣ್ಣು ರಹಿತ ಬೇಸಾಯ ಪದ್ಧತಿ ಮೂಲಕ ಬೆಳೆಯಲಾಗಿರುವ ಲಿಸಿಯಾಂತಸ್‌ ಹೈಬ್ರಿಡ್‌   

ಬೆಂಗಳೂರು: ಅಡುಗೆ ಎಣ್ಣೆ ತಯಾರಿಕೆಗೆ ಬಳಸುವ ಸೂರ್ಯಕಾಂತಿ ಕೃಷಿ ಮೇಳದ ಬೆಳೆ ಪ್ರಾತ್ಯಕ್ಷಿಕೆಯಲ್ಲಿ ಆಲಂಕಾರಿಕ ಪುಷ್ಪವಾಗಿ ಗಮನ ಸೆಳೆಯುತ್ತಿದೆ. 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಈ ಆಲಂಕಾರಿಕ ಸೂರ್ಯಕಾಂತಿ ತಳಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುತ್ತದೆ. ಬಿತ್ತನೆ ಮಾಡಿದ 45–55 ದಿನಗಳಲ್ಲಿಯೇ ಬೆಳೆ ರೈತರ ಕೈ ಸೇರುತ್ತದೆ. ಹೂದಾನಿ, ಹೂಗುಚ್ಛ ಮತ್ತು ಸಮಾರಂಭಗಳಲ್ಲಿ ಬಳಸಬಹುದು. ಸಾಮಾನ್ಯ ತಳಿಗಿಂತ ಆಲಂಕಾರಿಕ ಸೂರ್ಯಕಾಂತಿ 10 ಪಟ್ಟು ಹೆಚ್ಚು ಆದಾಯ ತಂದುಕೊಡಲಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಐದು ಎಕರೆಯ ಪ್ರದೇಶದ 11 ತಾಕುಗಳಲ್ಲಿ ವಿವಿಧ ಬೆಳೆ ಪ್ರಾತ್ಯಕ್ಷಿಕೆಯಿದ್ದು, ಮೆಕ್ಕೆ ಜೋಳ, ತೊಗರಿ, ಅವರೆ, ತರಕಾರಿ ಸೊಯಾ, ಅವರೆ ಸೊಯಾ, ಸೂರ್ಯಕಾಂತಿ ಮತ್ತು ಮೇವಿನ ಬೆಳೆಗಳನ್ನು ರೈತರು ಮತ್ತು ಸಾರ್ವಜನಿಕರು ವೀಕ್ಷಿಸಿ, ಜಿಕೆವಿಕೆಯ ಪ್ರಾಧ್ಯಾಪಕರಿಂದ ಮಾಹಿತಿ ಪಡೆದುಕೊಂಡರು.

ADVERTISEMENT

1.5 ಕೆ.ಜಿ ಬದನೆಕಾಯಿ: ಬೆಳೆ ಪ್ರಾತ್ಯಕ್ಷಿಕೆಯಲ್ಲಿ 1ರಿಂದ 1.5 ಕೆ.ಜಿಯ ಬಾಟಲ್‌ ಬದನೆಕಾಯಿ ಮತ್ತೊಂದು ಆಕರ್ಷಣೆಯಾಗಿತ್ತು. ಜಿಕೆವಿಕೆ ಅಭಿವೃದ್ಧಿಪಡಿಸಿರುವ ‌ಈ ತಳಿ ಮೊದಲ ಬಾರಿಗೆ ಮೇಳದಲ್ಲಿ ಪ್ರಾತ್ಯಕ್ಷಿಕೆಯಲ್ಲಿತ್ತು.

ಮಣ್ಣು ರಹಿತ, ಜಲ ಆಧಾರಿತ ಕೃಷಿ

ಮಣ್ಣು ರಹಿತ ಮತ್ತು ಜಲ ಆಧಾರಿತ ಬೇಸಾಯ ಪದ್ಧತಿಯ ಮಾಹಿತಿಗೆ ಜನಜಂಗುಳಿ ಇತ್ತು. ಗ್ರೋಬ್ಯಾಗ್‌ನಲ್ಲಿ ತೆಂಗಿನ ನಾರು ತುಂಬಿಸಿ, ಹನಿ ನೀರಾವರಿ ಮೂಲಕ ಬೆಳೆಯಲಾಗಿದ್ದ ಲೆಟ್ಯೂಸ್‌ ಅನ್ನು ಪ್ರದರ್ಶಿಸಲಾಗಿದೆ.

ಪುಷ್ಪಕೃಷಿಯಲ್ಲಿ ಗುಲಾಬಿಗೆ ಪರ್ಯಾಯ ಬೆಳೆ ಎನ್ನಲಾಗುತ್ತಿರುವ ‘ಲಿಸಿಯಾಂತಸ್‌ ಹೈಬ್ರಿಡ್‌’ ಕೂಡ ಮೇಳದ ಮತ್ತೊಂದು ಆಕರ್ಷಣೆಯಾಗಿದೆ. ಮಣ್ಣು ರಹಿತವಾಗಿ ಬೆಳೆಯಬಹುದಾದ ಲಿಸಿಯಾಂತಸ್‌ ಕಡಿಮೆ ಅವಧಿಯಲ್ಲಿ ಹಾಗೂ ಹೆಚ್ಚುವರಿ ಇಳುವರಿ ಕೊಡುತ್ತದೆ. ನೀರು ಪೋಲಾಗುವುದನ್ನು ತಡೆಯುವುದಲ್ಲದೆ, ಕಳೆ, ರೋಗದ ಕಾಟ ಇರುವುದಿಲ್ಲ. ರಾಸಾಯನಿಕಗಳ ಬಳಕೆ ತಗ್ಗಿಸಿ ಪರಿಸರ ಸಂರಕ್ಷಣೆ ಮಾಡಬಹುದು. ಜತೆಗೆ ರೈತರಿಗೆ ಲಾಭವನ್ನು ತಂದುಕೊಡಲಿದೆ ಎಂದು ಸಂಶೋಧನಾ ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಾಹಿತಿ ನೀಡಿದರು.

ಜಿಕೆವಿಕೆ ಕೃಷಿ ಮೇಳದಲ್ಲಿ ಮಣ್ಣು ರಹಿತ ಬೇಸಾಯ ಪದ್ಧತಿ ಮೂಲಕ ಬೆಳೆಯಲಾಗಿರುವ ಲಿಸಿಯಾಂತಸ್‌ ಹೈಬ್ರಿಡ್‌
ಆಲಂಕಾರಿಕ ಸೂರ್ಯಕಾಂತಿ ಗಿಡಗಳು

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.