ADVERTISEMENT

ಶಾಲೆ ಮಕ್ಕಳಿಗೆ ‘ರಾಜಗಿರ’ ಚಿಕ್ಕಿ: ಕೃಷಿ ವಿಜ್ಞಾನಿಗಳ ಪ್ರಸ್ತಾವ

6 ಸಾವಿರ ವರ್ಷಗಳ ಇತಿಹಾಸವುಳ್ಳ ಬೆಳೆ * ಕೃಷಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ

ಸಂತೋಷ ಜಿಗಳಿಕೊಪ್ಪ
Published 18 ನವೆಂಬರ್ 2023, 20:10 IST
Last Updated 18 ನವೆಂಬರ್ 2023, 20:10 IST
ರಾಜಗೀರ ಬೆಳೆ
ರಾಜಗೀರ ಬೆಳೆ   

ಬೆಂಗಳೂರು: ಸಿರಿಧಾನ್ಯಗಳ ಪೈಕಿ ಅತೀ ಹೆಚ್ಚು ಪೌಷ್ಠಿಕಾಂಶವುಳ್ಳ ರಾಜಗಿರ (ಬೀಜದ ದಂಟು) ಬೀಜಗಳ ಮೌಲ್ಯವರ್ಧನೆಯಿಂದ ಸಿದ್ಧಪಡಿಸಿದ ಚಿಕ್ಕಿಗಳನ್ನು ಶಾಲಾ ಮಕ್ಕಳಿಗೆ ವಿತರಿಸುವಂತೆ ಕೃಷಿ ವಿಜ್ಞಾನಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಜಿಕೆವಿಕೆ ಆವರಣದಲ್ಲಿ ರಾಜಗಿರ ಬೆಳೆಯ ಪ್ರಾತ್ಯಕ್ಷಿಕೆ ನೀಡುತ್ತಿರುವ ಕೃಷಿ ವಿಜ್ಞಾನಿಗಳು, ಬೆಳೆಯುವ ಕ್ರಮ ಹಾಗೂ ಸೇವೆನೆಯಿಂದಾಗುವ ಆರೋಗ್ಯದ ಉಪಯೋಗದ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ.

‘ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ರಾಜಗಿರ ಬೆಳೆಗೆ 6 ಸಾವಿರ ವರ್ಷಗಳ ಇತಿಹಾಸವಿದೆ. ರಾಜಗಿರ ಸೊಪ್ಪು ಎಲ್ಲರಿಗೂ ಚಿರಪರಿಚಿತ. ಅದಕ್ಕಿಂದ ಭಿನ್ನವಾದದ್ದು ಈ ರಾಜಗಿರ ಬೀಜ. ಇದು ರಾಜರ ಕಾಲದಲ್ಲಿ ಸೈನಿಕರಿಗೆ ವಿಶೇಷ ಆಹಾರವಾಗಿತ್ತು’ ಎಂದು ಕೃಷಿ ವಿಶ್ವವಿದ್ಯಾಲಯದ ಅಖಿಲ ಭಾರತ ಸುಸಂಘಟಿತ ಸಮರ್ಥ ಬೆಳೆಗಳ ಸಂಶೋಧನಾ ಪ್ರಾಯೋಜನೆಯ ಹಿರಿಯ ಬೇಸಾಯ ತಜ್ಞ ಡಾ. ಎಚ್‌.ಆರ್. ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೇರೆ ಸಿರಿಧಾನ್ಯಗಳಿಗೆ ಹೋಲಿಸಿದರೆ ರಾಜಗಿರ ಬೀಜಗಳಲ್ಲಿ ಪೌಷ್ಟಿಕಾಂಶ, ಕ್ಯಾಲ್ಸಿಯಂ, ನಾರು, ಖನಿಜ, ರಂಜಕ, ಪಿಷ್ಠ, ಲೈಸಿನ್, ಸಿಸ್ಟೀನ್, ಲ್ಯೂಸಿನ್ ಹಾಗೂ ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಜೊತೆಗೆ, ಶೇ 6ರಿಂದ 10ರಷ್ಟು ಎಣ್ಣೆ ಅಂಶವೂ ಇದೆ. ಹೀಗಾಗಿ, ಮಕ್ಕಳಿಗೆ ಹೇಳಿ ಮಾಡಿಸಿದ ಬೆಳೆ ರಾಜಗಿರ’ ಎಂದು ಹೇಳಿದರು.

‘ರಾಜಗಿರ ಬೀಜಗಳನ್ನು ಮೌಲ್ಯವರ್ಧನೆ ಮಾಡಿ ಹಿಟ್ಟು, ಚಪಾತಿ, ಉಂಡೆ, ಚಿಕ್ಕಿ, ಲಡ್ಡು, ಕೇಕ್, ಮಾಲ್ಟ್ ತಯಾರಿಸಲಾಗುತ್ತಿದೆ. ಹೀಗಾಗಿ, ರಾಜಗಿರ ಬೀಜದಿಂದ ತಯಾರಿಸಿದ ಚಿಕ್ಕಿಯನ್ನು ಶಾಲಾ ಮಕ್ಕಳಿಗೆ ನೀಡುವಂತೆ ಕೃಷಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಚಿವರಿಂದಲೂ ಸಕಾರಾತ್ಮಕ ಸ್ಪಂದನ ಸಿಕ್ಕಿದೆ’ ಎಂದು ಹೇಳಿದರು.

90 ದಿನಗಳ ಬೆಳೆ: ‘ರಾಜಗಿರ ನಾಲ್ಕು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಿತ್ತನೆ ಮಾಡಿದ 90 ದಿನಕ್ಕೆ ಕಟಾವು ಬರುತ್ತದೆ. ರೈತರು ಹೆಕ್ಟೇರ್‌ಗೆ 14ರಿಂದ 16 ಕ್ವಿಂಟಲ್ (ಖುಷ್ಕಿ) ಹಾಗೂ 18–20 ಕ್ವಿಂಟಲ್‌ ಇಳುವರಿ ಪಡೆಯಬಹುದು’ ಎಂದು ಡಾ. ಎಚ್‌.ಆರ್. ಆನಂದ್ ತಿಳಿಸಿದರು.

‘ರಾಜಗಿರ ಬೀಜಗಳಿಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದೆ. ಕೆಲ ಕಂಪನಿಗಳು, ಬೀಜಗಳನ್ನು ಖರೀದಿಸಿ ಮೌಲ್ಯವರ್ಧನೆ ಆಹಾರವನ್ನು ತಯಾರಿಸುತ್ತಿವೆ’ ಎಂದು ಹೇಳಿದರು.

ರಾಜಗೀರ ಬೀಜಗಳಿಂದ ತಯಾರಿಸಿದ ಚಿಕ್ಕಿ
ರತ್ನಮ್ಮ

‘ಮಹಿಳಾ ಗುಂಪುಗಳ ಮೂಲಕ ಚಿಕ್ಕಿ ತಯಾರಿ’

‘ಮಹಿಳಾ ಗುಂಪುಗಳನ್ನು ರಚಿಸಿಕೊಂಡು ರಾಜಗಿರ ಚಿಕ್ಕಿಗಳನ್ನು ತಯಾರಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಸದ್ಯ ಮೊಟ್ಟೆ ಬಾಳೆ ಹಣ್ಣು ಹಾಲು ಹಾಗೂ ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ರಾಜಗಿರ ಬೀಜದ ಚಿಕ್ಕಿ ನೀಡಿದರೆ ಮಕ್ಕಳ ಆರೋಗ್ಯ ಮತ್ತಷ್ಟು ಸುಧಾರಿಸಲಿದೆ. ಶೇಂಗಾ ಜೊತೆ ರಾಜಗಿರ ಮಿಶ್ರಣ ಮಾಡಿ ಚಿಕ್ಕಿ ತಯಾರಿಸಲೂಬಹುದು’ ಎಂದು 2023ನೇ ಸಾಲಿನ ಕೃಷಿ ಮೇಳದ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತರಾದ ರತ್ನಮ್ಮ ಹೇಳಿದರು. ‘ಕೆಲ ಸ್ವಯಂಸೇವಾ ಸಂಸ್ಥೆಯವರು ರಾಜಗಿರ ಚಿಕ್ಕಿಗಳನ್ನು ಖರೀದಿಸುತ್ತಿದ್ದಾರೆ. ವಿಶೇಷ ಪ್ಯಾಕೇಜ್‌ಗಳ ರೂಪದಲ್ಲಿ ಕೆಲ ಅಂಗನವಾಡಿಗಳ ಮಕ್ಕಳಿಗೆ ಪ್ರಾಯೋಗಿಕವಾಗಿ ವಿತರಣೆ ಮಾಡುತ್ತಿದ್ದಾರೆ. ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಿಕ್ಕಿ ವಿತರಣೆ ಮಾಡಬೇಕು. ಉತ್ತಮ ಸ್ಪಂದನೆ ಸಿಕ್ಕರೆ ರಾಜ್ಯದ ಎಲ್ಲ ಶಾಲೆಗಳ ಮಕ್ಕಳಿಗೆ ರಾಜಗಿರ ಚಿಕ್ಕಿ ನೀಡಬೇಕು’ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.