ADVERTISEMENT

ಕೃಷಿಮೇಳ: ಸಿರಿಧಾನ್ಯ ಪಿಜ್ಜಾ, ಲಡ್ಡುಗೆ ಮನಸೋತ ಜನ

ಸಿರಿಧಾನ್ಯದ ಬೇಕರಿ ಉತ್ಪನ್ನ ಸವಿದ ಜನ

ಪ್ರಜಾವಾಣಿ ವಿಶೇಷ
Published 18 ನವೆಂಬರ್ 2023, 19:59 IST
Last Updated 18 ನವೆಂಬರ್ 2023, 19:59 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯ ವರ್ಧನಾ ಸಂಸ್ಥೆ ಮಳಿಗೆಯಲ್ಲಿ ಸಿರಿಧ್ಯಾನದ ಬೇಕರಿ ತಿನಿಸು ತಯಾರಿಸುವಲ್ಲಿ ಜನರೂ ಪಾಲ್ಗೊಂಡಿದ್ದರು
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯ ವರ್ಧನಾ ಸಂಸ್ಥೆ ಮಳಿಗೆಯಲ್ಲಿ ಸಿರಿಧ್ಯಾನದ ಬೇಕರಿ ತಿನಿಸು ತಯಾರಿಸುವಲ್ಲಿ ಜನರೂ ಪಾಲ್ಗೊಂಡಿದ್ದರು   

ಬೆಂಗಳೂರು: ಕೇಕ್‌, ಪಿಜ್ಜಾ ಮತ್ತಿತರ ತಿನಿಸುಗಳು ಅನಾರೋಗ್ಯಕರ. ಅವುಗಳ ಸೇವನೆಯಿಂದ ಅತಿಯಾದ ಬೊಜ್ಜು ಬರುತ್ತದೆ ಎಂಬ ಮಾತುಗಳು ಸಾಮಾನ್ಯ. ಇದಕ್ಕೆ ತದ್ವಿರುದ್ಧವಾಗಿ, ‘ಕೇಕ್‌, ಸ್ಪಾಂಜ್‌ ಕೇಕ್‌, ರಸ್ಕ್, ಪಿಜ್ಜಾ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ’ ಎಂಬ ಸಂದೇಶ ಕೃಷಿಮೇಳದಲ್ಲಿ ಕೇಳಿಬಂತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯ ವರ್ಧನಾ ಸಂಸ್ಥೆಯ ಮಳಿಗೆಯಲ್ಲಿ ನವಣೆ, ಬರಗು, ಊದಲು, ಸಜ್ಜೆ, ಹಾರಕ ಮತ್ತು ರಾಗಿಯಿಂದ ತಯಾರಿಸಿದ ಬಗೆ ಬಗೆಯ ಬೇಕರಿ ತಿನಿಸುಗಳು ಜನರ ಬಾಯಲ್ಲಿ ನೀರೂರಿಸಿದವು.

ಸಿರಿಧಾನ್ಯ ಹಿಟ್ಟಿನಿಂದ ತಯಾರಿಸಿದ ಬಿಸ್ಕತ್‌, ಕೇಕ್‌, ಸ್ಪಾಂಜ್‌ ಕೇಕ್‌, ರಸ್ಕ್ ಮತ್ತು ಪಿಜ್ಜಾ ಸೇರಿ ಇತರೆ ಬೇಕರಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮೇಳದ ಆಕರ್ಷಕ ಬಿಂದುವಾಗಿದೆ. ಜತಗೆ ಅವುಗಳನ್ನು ತಯಾರಿಸುವ ಬಗ್ಗೆಯೂ‌ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಮೈದಾ ಬಳಸದೆ ಸಾಮೆ ಹಿಟ್ಟು ಬಳಸಿ ತಯಾರಿಸುವ ಪಿಜ್ಜಾ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ‌ಸಿರಿಧಾನ್ಯದ ಕ್ಯಾರೇಟ್‌ ಕಪ್‌ ಕೇಕ್‌, ಫ್ರೂಟ್‌ ಕಪ್‌ ಕೇಕ್‌ಗೆ ಭಾರಿ ಬೇಡಿಕೆ ಇದ್ದು, ಮಳಿಗೆಯಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತಿದೆ.

ADVERTISEMENT

‘ಸಿರಿಧಾನ್ಯದ ಲಡ್ಡು‌ ಜನಪ್ರಿಯ ಗಳಿಸಿದ್ದು, ಮಳಿಗೆಯಲ್ಲಿರುವ ಲಡ್ಡು ಪೂರ್ಣ ಖಾಲಿ ಆಗಿದೆ. ಮೊದಲ ದಿನಕ್ಕಿಂತ ಇಂದು ಸಿರಿಧಾನ್ಯ ಪಿಜ್ಜಾಗೆ ಭಾರಿ ಬೇಡಿಕೆ ಬಂದಿದೆ. ತಯಾರಿಸಲಾಗಿದ್ದ 500 ಪಿಜ್ಜಾ ಖಾಲಿಯಾಗಿದೆ. ಬಿಸಿ ನೀರಿನಲ್ಲಿ ಸೇರಿಸಿ ಕುಡಿಯುವ ‘ಸಿರಿಧಾನ್ಯ ಮ್ಯಾಜಿಕ್‌ ಡ್ರಿಂಕ್‌’ ಕೂಡ ಜನರಿಗೆ ಇಷ್ಟವಾಗಿದೆ’ ಎನ್ನುತ್ತಾರೆ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ.

ಆಸಕ್ತರಿಗೆ ತರಬೇತಿ: ‘ಸಿರಿಧಾನ್ಯ ಬಳಸಿಕೊಂಡು ಹಲವು ಫ್ಲೇವರ್‌ಗಳಲ್ಲಿ ಬೇಕರಿ ಆಹಾರ ಪದಾರ್ಥ ತಯಾರಿಸುತ್ತಿದ್ದೇವೆ. ಈ ತಂತ್ರಜ್ಞಾನವನ್ನು ಆಸಕ್ತಿವುಳ್ಳ ಬೇಕರಿ ಮತ್ತು ಉದ್ಯಮಿಗಳ ನಮ್ಮಿಂದ ಪಡೆಯಬಹುದು. ಅಗತ್ಯ ಇರುವವರಿಗೆ ತರಬೇತಿಯನ್ನು ನೀಡುತ್ತೇವೆ’ ಎಂದು ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ ಸಂಯೋಜಕಿ ಡಾ.ಸವಿತಾ ತಿಳಿಸಿದರು.

ಜನರೇ ಬಾಣಸಿಗರಾಗಿ ತಿನಿಸು ತಯಾರಿಸಲು ಮಳಿಗೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಫುಡ್‌ಕೋರ್ಟ್‌ ಮತ್ತು ಸಿರಿಧಾನ್ಯ ಮಳಿಗೆಯಲ್ಲಿ ಸಿರಿಧಾನ್ಯದ ಚಾಕೋಲೆಟ್‌, ವೇಪರ್‌, ಐಸ್‌ಕ್ರೀಮ್‌, ಬ್ರೆಡ್‌, ಬನ್‌, ಮಿಲ್ಕ್‌ ಬನ್‌, ಸ್ಯಾಂಡ್‌ವೆಡ್ಜ್‌ ಬ್ರೆಡ್‌, ಬರ್ಗರ್‌ ಬನ್‌ ಖರೀದಿ ಹೆಚ್ಚಾಗಿತ್ತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯ ವರ್ಧನಾ ಸಂಸ್ಥೆ ಮಳಿಗೆಯಲ್ಲಿ ಸಿರಿಧ್ಯಾನದ ಉತ್ಪನ್ನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.