ADVERTISEMENT

ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ವೇಳೆ ಗೋಡ್ಸೆ ಚಿತ್ರ ಪ್ರದರ್ಶನ:ಬೊಮ್ಮಾಯಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:10 IST
Last Updated 15 ಸೆಪ್ಟೆಂಬರ್ 2022, 4:10 IST
   

ಬೆಂಗಳೂರು: ‘ಶಿವಮೊಗ್ಗದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಹಿಂದೂ ಮಹಾಸಭಾದ ಕಾರ್ಯಕರ್ತರು ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶಿಸಿರುವುದು ಆತಂಕಕಾರಿ ಘಟನೆ. ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

‘ಗಾಂಧೀಜಿ ಹತ್ಯೆ ವಿಜೃಂಭಿಸುವುದು ದೇಶಕ್ಕೆ ಅಗೌರವ ತೋರಿಸಿದಂತಾಗುತ್ತದೆ. ಶಿವಮೊಗ್ಗದ ಅಮೀರ್‌ ಅಹಮದ್‌ ವೃತ್ತ ಹಾಗೂ ಬಸ್ ನಿಲ್ದಾಣದ ಎದುರು ಅಶೋಕ ಸ್ತಂಭದ ಮೇಲಿನ ರಾಷ್ಟ್ರ ಲಾಂಛನದ ಮೇಲೆ ಭಗವಾಧ್ವಜ ಹಾರಾಡಿಸಿದ ಘಟನೆಯೂ ನಡೆದಿದೆ. ಈ ಎರಡೂ ಘಟನೆಗಳು ಕರ್ನಾಟಕ ಗಾಂಧಿ ಸ್ಮಾರಕ ನಿಧಿಗೆ ಆತಂಕ ತಂದಿವೆ‘ ಎಂದಿದ್ದಾರೆ.

‘ಬೆಂಗಳೂರಿನ ಗಾಂಧಿ ಭವನದ ಆವರಣದಲ್ಲಿ ಮೌನ ಪ್ರತಿಭಟನೆ ಮಾಡುವ ಬಗ್ಗೆ ಆಲೋಚಿಸಿದ್ದೆವು. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ಮತೀಯ ಸಂಘರ್ಷದ ಸಂದರ್ಭದಲ್ಲಿ ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದು ಸೌಹಾರ್ದ ವಾತಾವರಣವನ್ನು ಹದಗೆಡುವಂತೆ ಮಾಡುವುದು ಸರಿಯಲ್ಲ ಎಂದು ತೀರ್ಮಾನಿಸಿ ಪ್ರತಿಭಟನೆ ವಿಷಯ ಕೈಬಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಹಿಂದೂ ಮಹಾಸಭಾ ಸಂಘಟನೆಯು ತನ್ನ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಚಾರಪಡಿಸಲು ನಮ್ಮ ಆಕ್ಷೇಪ ಇಲ್ಲ. ಆದರೆ, ರಾಷ್ಟ್ರಪಿತ ಎಂದು ಇಡೀ ದೇಶದ ಜನ ಒಪ್ಪಿಕೊಂಡಿರುವಾಗ ಅವರೆಲ್ಲರ ಮನಸಿಗೆ ಆಘಾತ ಆಗುವ ಕೃತ್ಯ ನಡೆಸುವುದು ಸರಿಯಲ್ಲ. ನಮ್ಮ ರಾಷ್ಟ್ರ ಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳ ಸಂಹಿತೆಗೆ ಅಪಚಾರ ಆಗುವಂತಹ ನಡವಳಿಕೆಗಳೂ ಸಂವಿಧಾನಬಾಹಿರ’ ಎಂದಿದ್ದಾರೆ.

‘ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವಂತೆ ಉದ್ದೇಶಪೂರ್ವಕವಾಗಿ ನಡೆದುಕೊಂಡಿರುವುದು ಸರಿಯಾದ ನಡವಳಿಕೆ ಅಲ್ಲ. ನಮ್ಮ ಸದುದ್ದೇಶದ ಭಾವನೆಯನ್ನು ಹಾಗೂ ನಮ್ಮ ಪ್ರತಿಭಟನಾತ್ಮಕ ನಿಲುವನ್ನು ನೀವು ಗೌರವಿಸಿ ತಪ್ಪು ಎಸಗಿರುವ ಸಂಘಟನೆ ಅಥವಾ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.