ADVERTISEMENT

‘ಖಾಸಗಿ ಆಸ್ಪತ್ರೆಗಳ ಜಾಲಕ್ಕೆ ಸರ್ಕಾರ ಬೀಳೋದು ಬೇಡ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 21:57 IST
Last Updated 19 ಏಪ್ರಿಲ್ 2020, 21:57 IST
ಡಾ.ವೆಂಕಟೇಶ್‌
ಡಾ.ವೆಂಕಟೇಶ್‌   

ಬೆಂಗಳೂರು: ಕೋವಿಡ್‌–19 ಸಮಸ್ಯೆ ಬಗೆಹರಿದ ಬಳಿಕ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯವನ್ನು ಸರ್ಕಾರವೇ ಸಮರ್ಪಕ ಬಳಕೆ ಮಾಡಬೇಕು, ಖಾಸಗಿ ಸಹಭಾಗಿತ್ವಕ್ಕೆ ವಹಿಸಬಾರದು ಎಂದು ಫೌಂಡೇಷನ್‌ ಫಾರ್‌ ಈಕ್ವಾಲಿಟಿಯ ನಿರ್ದೇಶಕ ಡಾ.ಥುಪ್ಪಿಲ್ ವೆಂಕಟೇಶ್‌ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಆರೋಗ್ಯದ ವಿಷಯದ ಕುರಿತ ಸಲಹೆಗಾರರೂ ಆಗಿರುವ ವೆಂಕಟೇಶ್ ಅವರು, ಈ ಸಂಬಂಧ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರವನ್ನೂ ಬರೆದಿದ್ದಾರೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಆಸ್ಪತ್ರೆಗಳಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗುವಂತೆ ಆರೋಗ್ಯ ಆರೈಕೆ ವ್ಯವಸ್ಥೆಯನ್ನು ಮಾಡಿದೆ. ಐಸೋಲೇಷನ್‌ ವಾರ್ಡ್‌, ಐಸಿಯು ಮತ್ತು ವೆಂಟಿಲೇಟರ್‌ಗಳು ಹೈಟೆಕ್‌ ಆಸ್ಪತ್ರೆಗಳಿಗೆ ಸಮಾನವಾಗಿವೆ. ಈ ವ್ಯವಸ್ಥೆಯ ಮೇಲೆ ಕಣ್ಣಿಟ್ಟು ಖಾಸಗಿ ಆಸ್ಪತ್ರೆಗಳು ಸಹಭಾಗಿತ್ವಕ್ಕೆ ಮುಂದಾಗಬಹುದು. ಅದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ADVERTISEMENT

ಲಾಕ್‌ಡೌನ್‌ನಿಂದಾಗಿ ಖಾಸಗಿ ಮತ್ತು ಕಾರ್ಪೊರೇಟ್‌ ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಆಸ್ಪತ್ರೆಗಳಿಗೆ ರೋಗಿಗಳು ಬರುತ್ತಿಲ್ಲ. ವಿದೇಶಗಳಿಂದ ಬರುತ್ತಿದ್ದ ರೋಗಿಗಳು ಈಗ ಬರುತ್ತಿಲ್ಲ. ಹಿಂದೆ ಅಪಘಾತಗಳಿಂದ ತುರ್ತು ಚಿಕಿತ್ಸೆಗೆ ಜನ ಬರುತ್ತಿದ್ದರು. ಇದರಿಂದಾಗಿ ಸಂಪೂರ್ಣ ನಷ್ಟಕ್ಕೆ ತುತ್ತಾಗಿವೆಯೆಂದು ಅವುಗಳ ಮಾಲೀಕರು ಹೇಳುತ್ತಿದ್ದಾರೆ ಎಂದಿದ್ದಾರೆ.

‘ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ಧ್ಯೇಯೊದ್ದೇಶಗಳಲ್ಲಿ ವ್ಯತ್ಯಾಸವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಟ್ಟ ವ್ಯವಸ್ಥೆಯಿಂದಾಗಿ ಜನರು ಖಾಸಗಿ ಆಸ್ಪತ್ರೆಗೆ ಹೋಗುವ ಸ್ಥಿತಿ ಇದೆ. ಸರ್ಕಾರವು ಸರ್ಕಾರಿ ಅಸ್ಪತ್ರೆಗಳಿಗೇ ಆದ್ಯತೆ ನೀಡಬೇಕು. ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಪರಿಹಾರವನ್ನು ಕೇಳುತ್ತಿವೆ. ತೆರಿಗೆ ಹಾಕಬೇಡಿ ಎನ್ನುತ್ತಿದ್ದಾರೆ. ಆಸ್ಪತ್ರೆ ನಿರ್ಮಿಸಲು ಸಾಲ ಮಾಡಿದ್ದೇವೆ, ಅದನ್ನು ತೀರಿಸಬೇಕಿದೆ. ಆಸ್ಪತ್ರೆಗಳನ್ನು ಉಳಿಸಿಕೊಳ್ಳಬೇಕಿದೆ. ಖಾಸಗಿಯವರು ಹಣ ಮಾಡುವುದಕ್ಕಾಗಿಯೇ ಆಸ್ಪತ್ರೆ ಮಾಡಿದ್ದು ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.

‘ಮುಂದೆ ಸರ್ಕಾರಿ ನೌಕರರು, ಶಾಸಕರು, ಸಂಸದರು, ಕಾರ್ಪೊರೇಟರ್‌ಗಳು, ಗ್ರಾಮಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲ ರೀತಿಯ ಜನಪ್ರತಿನಿಧಿಗಳು ಮತ್ತು ಅವರ ಕುಟುಂಬದವರು ಅನಾರೋಗ್ಯಕ್ಕೆ ತುತ್ತಾದಾಗ ಸರ್ಕಾರಿ ಆಸ್ಪತ್ರೆಗೆ ಹೋಗುವುದು ಕಡ್ಡಾಯ ಮಾಡಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.