ಬೆಂಗಳೂರು: ಮಾದಕ ವಸ್ತುಗಳ ಬಳಕೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಶೆ ಮುಕ್ತ ಸಮಾಜ ನಿರ್ಮಿಸಬೇಕು. ಶಾಲಾ, ಕಾಲೇಜುಗಳ ಆವರಣದಲ್ಲಿ ನಶೆ ಮುಕ್ತ ಭಾರತ ಅಭಿಯಾನದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದಕವಸ್ತುಗಳ ಬಳಕೆಯಿಂದ ಹಲವರು ಹಾಳುಗುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವೂ ಮಸಕಾಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ನಿಯಂತ್ರಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ಯುವ ಜನತೆಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಯೋಗ, ಧ್ಯಾನದ ಮೂಲಕ ದುಶ್ಚಟಗಳಿಂದ ದೂರ ಇರಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆರೋಗ್ಯಯುತ ಜೀವನಕ್ಕೆ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಬಿ.ಸಿ.ಭಗವಾನ್ ಮಾತನಾಡಿ, ದೇಶದಲ್ಲಿ ಸುಮಾರು 27 ಕೋಟಿ ಜನರು ನೇರ ಹಾಗೂ ಪರೋಕ್ಷವಾಗಿ ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆ. ಈ ಪೈಕಿ 4 ಕೋಟಿ ಜನರು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡ್ರಗ್ಸ್ ಮುಕ್ತ ಕ್ಯಾಂಪಸ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮಾದಕ ವಸ್ತುಗಳ ನಿಯಂತ್ರಣ ಮಂಡಳಿಯ ವಲಯ ನಿರ್ದೇಶಕ ಸಚಿನ್ ಘೋರ್ಪಡೆ ಮಾತನಾಡಿ, ವಿದೇಶಗಳಿಂದ ಮಾದಕವಸ್ತು ಅಕ್ರಮವಾಗಿ ಪೂರೈಕೆ ಆಗುತ್ತಿದೆ. ದೇಶದ ವಿದ್ಯಾರ್ಥಿಗಳು ಮತ್ತು ಯುವ ಜನರನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡಲಾಗುತ್ತಿದೆ ಎಂದರು.
ಎಸ್.ವ್ಯಾಸ್ ವಿಶ್ವವಿದ್ಯಾಲಯದ ಕುಲಪತಿ ಎಚ್.ಆರ್.ನಾಗೇಂದ್ರ, ಜೂನ್ 21 ಯೋಗ ದಿನದಿಂದ ನಶೆ ಮುಕ್ತ ಭಾರತ ಅಭಿಯಾನ ಆರಂಭವಾಗಲಿದೆ ಎಂದರು.
ಭಾರತೀಯ ನರ್ಸಿಂಗ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ.ಕೆ.ವಿಜಯಕುಮಾರ್, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ, ನಟ ವಿದ್ಯುತ್ ಜಾಮ್ವಾಲ್ ಮಾತನಾಡಿದರು.
45 ವಿದ್ಯಾರ್ಥಿಗಳ ಬಂಧನ
ಎರಡು ತಿಂಗಳಲ್ಲಿ ಡ್ರಗ್ಸ್ ಮಾರಾಟ ಮತ್ತು ಸೇವನೆ ಪ್ರಕರಣದಲ್ಲಿ 45 ವಿದ್ಯಾರ್ಥಿಗಳು ಬಂಧಿತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ಆಮಿಷವೊಡ್ಡಿ ಅವರಿಂದಲೇ ಅಕ್ರಮ ದಂಧೆ ನಡೆಸುವಂತಹ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರ ಬಗ್ಗೆ ಅರಿವು ಇಲ್ಲದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಯಾರಿಗೂ ನೀಡಬಾರದು. ಇದನ್ನು ಬಳಸಿ ಡ್ರಗ್ಸ್ ವಹಿವಾಟು ಮಾಡಲಾಗುತ್ತದೆ. ಡ್ರಗ್ಸ್ ವ್ಯಾಪಾರದಲ್ಲಿ ಸಿಕ್ಕಿಬಿದ್ದರೆ ಹತ್ತು ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ಮಾದಕ ವಸ್ತುಗಳ ನಿಯಂತ್ರಣ ಮಂಡಳಿ ವಲಯ ನಿರ್ದೇಶಕ ಸಚಿನ್ ಘೋರ್ಪಡೆ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.