ADVERTISEMENT

ಸರ್ಕಾರಿ ಜಮೀನು ಪರಭಾರೆ ಪ್ರಕರಣ: ಹಿರಿಯ ನೋಂದಣಾಧಿಕಾರಿ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 22:36 IST
Last Updated 22 ಜೂನ್ 2021, 22:36 IST

ಬೆಂಗಳೂರು: ಹಿಡುವಳಿ ಜಮೀನಿನ ಹೆಸರಿನಲ್ಲಿ ಸರ್ಕಾರಿ ‘ಎ’ ಮತ್ತು ‘ಬಿ’ ಖರಾಬು ಹಾಗೂ ಸಾರ್ವಜನಿಕ ರಸ್ತೆಗೆ ಕಾಯ್ದಿರಿಸಿದ್ದ ಜಮೀನುಗಳನ್ನೂ ಪರಭಾರೆ ಮಾಡಿದ್ದ ಕ್ರಯಪತ್ರವನ್ನು ನೋಂದಾಯಿಸಿಕೊಂಡಿದ್ದ ಆರೋಪದ ಮೇಲೆ ಇಂದಿರಾನಗರ ಉಪ ನೋಂದಣಿ ಕಚೇರಿಯ ಹಿರಿಯ ನೋಂದಣಾಧಿಕಾರಿ ಎಂ.ಕೆ. ಶಾಂತಮೂರ್ತಿ ಅವರನ್ನು ‘ಕಾರ್ಯಕಾರಿ ಹುದ್ದೆ’ಯಿಂದ ಬಿಡುಗಡೆಗೊಳಿಸಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಕೆ.ಆರ್‌.ಪುರ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 20ರಲ್ಲಿನ ಸರ್ಕಾರಿ ಜಮೀನು ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಜರುಗಿಸಲಾಗಿದೆ. ತನಿಖಾ ವರದಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತಡೆ ಇರುವುದರಿಂದ ಅಮಾನತು ಬದಲಿಗೆ ‘ಕಾರ್ಯಕಾರಿ ಹುದ್ದೆ’ಯಿಂದ ಬಿಡುಗಡೆಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ. ಮೋಹನ್‌ ರಾಜ್‌ ಇದೇ 19ರಂದು ಆದೇಶ ಹೊರಡಿಸಿದ್ದಾರೆ.

ಚಿನ್ನಪ್ಪನಹಳ್ಳಿ ಗ್ರಾಮದ ಸ.ನಂ. 20ರಲ್ಲಿ 19 ಎಕರೆ 19 ಗುಂಟೆ ಜಮೀನು ಇತ್ತು. ಇದರಲ್ಲಿ 4 ಎಕರೆ 39 ಗುಂಟೆ ಮಾತ್ರ ಹಿಡುವಳಿ ಜಮೀನು. 13 ಗುಂಟೆಯನ್ನು ಸಾರ್ವಜನಿಕ ರಸ್ತೆಗೆ ಕಾಯ್ದಿರಿಸಲಾಗಿತ್ತು. 10 ಎಕರೆ 20 ಗುಂಟೆ ‘ಎ’ ಖರಾಬು ಮತ್ತು 3 ಎಕರೆ 27 ಗುಂಟೆ ‘ಬಿ’ ಖರಾಬು ಜಮೀನು ಇತ್ತು. ಎಲ್ಲವನ್ನೂ ಒಂದೇ ಕುಟುಂಬದ ಆಸ್ತಿ ಎಂಬಂತೆ ನೋಂದಣಿ ಮಾಡಲಾಗಿತ್ತು ಎಂಬ ಅಂಶ ತನಿಖಾ ವರದಿಯಲ್ಲಿದೆ.

ADVERTISEMENT

ಚಿನ್ನಪ್ಪನಹಳ್ಳಿ ನಿವಾಸಿಗಳಾದ ಟಿ. ಮುರಳೀಧರ, ಟಿ. ವಿಜಯಕುಮಾರ್‌, ಟಿ. ಉಮಾಶಂಕರ್‌, ಎಸ್‌. ರವಿಕುಮಾರ್‌, ಎಸ್‌. ನರೇಂದ್ರ ಬಾಬು ಮತ್ತು ಎಚ್‌. ವೆಂಕಟರೆಡ್ಡಿ, ವಿ. ಭಾಗ್ಯಲಕ್ಷ್ಮಿ, ವಿ. ಕವಿತಾ ರೆಡ್ಡಿ ಮತ್ತು ವಿ. ಅರವಿಂದ ರೆಡ್ಡಿ ಎಂಬುವವರ ನಡುವೆ ‘ವ್ಯವಸ್ಥಾ ಪತ್ರ’ (ಪಾಲು) ನೋಂದಣಿ ಮಾಡಲಾಗಿದೆ. 2020ರ ಡಿಸೆಂಬರ್‌ 2ರಂದು ಈ ಪತ್ರವನ್ನು ನೋಂದಣಿ ಮಾಡಲಾಗಿತ್ತು. ಬಳಿಕ ಭಾಗ್ಮನೆ ಡೆವಲಪರ್ಸ್‌ ಜತೆ ಅದೇ ದಿನ ಜಂಟಿ ಅಭಿವೃದ್ಧಿ ಒಪ್ಪಂದವನ್ನೂ ನೋಂದಣಿ ಮಾಡಲಾಗಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಈ ಪ್ರಕರಣದ ಕುರಿತು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ನಿಯಮ 351ರ ಅಡಿಯಲ್ಲಿ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಬಳಿಕ ತನಿಖೆ ಆರಂಭಿಸಲಾಗಿತ್ತು. ಹಿರಿಯ ನೋಂದಣಾಧಿಕಾರಿ ಶಾಂತಮೂರ್ತಿ ಮತ್ತು ಖಾಸಗಿ ವ್ಯಕ್ತಿಗಳು ಅಕ್ರಮ ಎಸಗಿರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಂದಿರಾನಗರ ಉಪ ನೋಂದಣಿ ಕಚೇರಿಯ ಹಿರಿಯ ನೋಂದಣಿ ಅಧಿಕಾರಿ ಹುದ್ದೆಯಿಂದ ಶಾಂತಮೂರ್ತಿ ಅವರನ್ನು ತೆರವು ಮಾಡಿದ್ದು, ನೋಂದಣಿ ಮತ್ತು ಮುದ್ರಾಂಕ ಆಯುಕ್ತರ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.