ADVERTISEMENT

‘ಬಿಎಂಪಿಸಿ’ಗೆ ಕಾಯಕಲ್ಪ – ಸರ್ಕಾರ ನಿರುತ್ಸಾಹ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 20:11 IST
Last Updated 14 ಅಕ್ಟೋಬರ್ 2019, 20:11 IST

ಬೆಂಗಳೂರು: ನಗರದ ಅಭಿವೃದ್ಧಿಯ ರೂಪುರೇಷೆ ತಯಾರಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಇದ್ದೂ ಇಲ್ಲದಂತಾಗಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ತಿಂಗಳೂ ಕಳೆದರೂ ಈ ಸಮಿತಿಗೆ ಶಕ್ತಿ ತುಂಬುವ ಯಾವುದೇ ಪ್ರಯತ್ನ ನಡೆದಿಲ್ಲ.

ನ್ಯಾಯಾಲಯ ಮಧ್ಯಪ್ರವೇಶಿಸಿದ್ದರಿಂದ ಆಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015ರಲ್ಲಿ ಬಿಎಂಪಿಸಿಯನ್ನು ರಚಿಸಿತ್ತು. ಆದರೆ, ಅದು ಸಭೆ ಸೇರಿರುವುದು ಕೇವಲ ಎರಡೇ ಬಾರಿ.

‘ನ್ಯಾಯಾಲಯವನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬಿಎಂಪಿಸಿ ರಚಿಸಲಾಯಿತು. ಅದು ಯಾವತ್ತೂ ನಗರದ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ವರ್ತಿಸಲೇ ಇಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಬೇಕಾದ ಸಮಿತಿ ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಮಾತ್ರ ಸಭೆ ಸೇರಿದೆ. ಅದೂ ಕಾಟಾಚಾರಕ್ಕೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಿಟಿಜನ್ಸ್‌ ಆ್ಯಕ್ಷನ್ ಫೋರಂನ ಎನ್‌.ಎಸ್‌.ಮುಕುಂದ್‌.

ADVERTISEMENT

‘ಎಂಪಿಸಿಗಳ ನಿಷ್ಕ್ರಿಯತೆ ನಮ್ಮ ರಾಜ್ಯಕ್ಕೆ ಸೀಮಿತವಲ್ಲ. ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಉಳಿದ ಯಾವ ರಾಜ್ಯಗಳಲ್ಲೂ ಅವು ಸಕ್ರಿಯವಾಗಿಲ್ಲ. ಸಂವಿಧಾನದ 74ನೇ ತಿದ್ದುಪಡಿಗಳ ಪ್ರಕಾರ ನಗರದ ಅಭಿವೃದ್ಧಿ ಮುನ್ನೋಟಗಳಿಗೆ ಸಂಬಂಧಿಸಿದ ನೀತಿಯನ್ನು ರೂಪಿಸುವ ಅಧಿಕಾರ ಇರುವುದು ಬಿಎಂಪಿಸಿಗೆ. ಆದರೆ, ಅದರ ಮಹತ್ವವನ್ನು ಯಾವ ಸರ್ಕಾರವೂ ಅರಿತುಕೊಂಡಿಲ್ಲ’ ಎನ್ನುತ್ತಾರೆ ನಗರ ಯೋಜನಾ ತಜ್ಞ ವಿ.ರವಿಚಂದರ್‌.

‘ನಗರದ ಮೂಲಸೌಕರ್ಯ ಅಭಿವೃದ್ಧಿಯ ಭಾರಿ ಯೋಜನೆಗಳಿಗೆಲ್ಲ ಬಿಎಂಪಿಸಿ ಅನುಮೋದನೆ ಅತ್ಯಗತ್ಯ. ಜನಪ್ರತಿನಿಧಿಗಳು ಹಾಗೂ ನಗರ ತಜ್ಞರನ್ನು ಒಳಗೊಂಡ ಈ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದೇ ಆದರೆ, ನಗರದ ಅಭಿವೃದ್ಧಿಗೆ ವೇಗ ನೀಡಬಹುದು. ಸಾಕಷ್ಟು ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬಹುದು. ನೂತನ ಸರ್ಕಾರವಾದರೂ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.