ADVERTISEMENT

ಗ್ರಾಮ ಪಂಚಾಯ್ತಿ ನೌಕರರ ಪ್ರತಿಭಟನೆ 19ರಿಂದ: ದೇವಿಪ್ರಸಾದ ಬೊಲ್ಮ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 14:39 IST
Last Updated 6 ಡಿಸೆಂಬರ್ 2022, 14:39 IST

ಬೆಂಗಳೂರು: ಗ್ರಾಮ ಪಂಚಾಯ್ತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ. 19ರಂದು ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ತಿಳಿಸಿದೆ

‘ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್‌/ ಕ್ಲರ್ಕ್‌ ಕಮ್‌ ಡಿಇಓ ನೌಕರರಿಗೆ ಸಿ, ಅಟೆಂಡರ್‌, ಪಂಪ್‌ ಚಾಲಕರಿಗೆ ಡಿ ದರ್ಜೆ ಸ್ಥಾನಮಾನ ನೀಡಬೇಕು. ಪಟ್ಟಣ ಪಂಚಾಯ್ತಿಯ ನೌಕರರಿಗೆ ನಿಗದಿ ಪಡಿಸಿರುವ ವೇತನ ಶ್ರೇಣಿಯ ನಮಗೂ ಅನ್ವಯಿಸಬೇಕು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ದೇವಿಪ್ರಸಾದ ಬೊಲ್ಮ ಮಂಗಳವಾರ ಸುದ್ದಿಗೋಷ್ಠಿ ಮಾಹಿತಿ ನೀಡಿದರು.

‘ಇಲಾಖೆಯ ಅಭಿವೃದ್ಧಿಗೆ ಮೂರು ದಶಕಗಳಿಂದ ಹಗಲಿರುಳು ದುಡಿಯುತ್ತಿರುವ ಬಿಲ್‌ ಕಲೆಕ್ಟರ್‌, ಕ್ಲರ್ಕ್‌ ಕಮ್‌ ಡಿಇಓ, ಡಾಟ ಎಂಟ್ರಿ ಅಪರೇಟರ್‌, ವಾಟರ್‌ಮ್ಯಾನ್, ಪಂಪು ಚಾಲಕ, ಶುಚಿತ್ವ ನೌಕರರು ಹಾಗೂ ಅಟೆಂಡರ್‌ಗಳ ಮತ್ತು ಅವರ ಅವಲಂಬಿತರಿಗೆ ಆರೋಗ್ಯ ಭದ್ರತೆ ಮತ್ತು ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಬೇಕು. ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಜಿಲ್ಲಾ ಪಂಚಾಯತ್‌ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜಿಲ್ಲಾ ಪಂಚಾಯಿತಿ ಅನುಮೋದನೆಯಾಗದೆಯೇ ನಿವೃತ್ತಿಯಾದ ಹಾಗೂ ನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು. ಈ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸರ್ಕಾರವೇ ಒಂದು ಶಾಶ್ವತ ನಿಧಿಯನ್ನು ಕಾಯ್ದಿರಿಸಬೇಕು. ನಿವೃತ್ತಿ ಹೊಂದಿದ ಒಂದು ತಿಂಗಳಿನೊಳಗಾಗಿ ಗೌರವ ನಿವೃತ್ತಿ ಧನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.