ಬೆಂಗಳೂರು: ರಾಜ್ಯದಲ್ಲಿ ಮರೆಗುಳಿತನಕ್ಕೆ (ಡಿಮೆನ್ಶಿಯಾ) ಒಳಪಡುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಆರೋಗ್ಯ ಇಲಾಖೆಯು ‘ಗೃಹ ಆರೋಗ್ಯ’ ಯೋಜನೆಯಡಿ ಈ ಕಾಯಿಲೆಗೆ ಒಳಗಾದವರನ್ನು ಗುರುತಿಸಿ, ಚಿಕಿತ್ಸೆ ಒದಗಿಸಲು ಮುಂದಾಗಿದೆ.
ಮಿದುಳಿನ ನರಕೋಶ ನಶಿಸುವಿಕೆಯಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಾಯಿಲೆಗೆ ಒಳಗಾದವರಿಗೆ ನೆನಪಿನ ಶಕ್ತಿ ಕುಂದುವ ಜತೆಗೆ ಇನ್ನಿತರ ಕ್ಷಮತೆಗಳಲ್ಲಿಯೂ ಮಹತ್ತರವಾದ ಬದಲಾವಣೆಯಾಗುತ್ತದೆ. ಸಂವಹನ ತೊಂದರೆ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಕುಟುಂಬದ ಮೇಲೂ ಪರಿಣಾಮ ಬೀರಲಿದೆ. 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿರುವ ಒಟ್ಟು ಪ್ರಕರಣಗಳಲ್ಲಿ ಶೇ 10ಕ್ಕಿಂತ ಕಡಿಮೆ ಮಂದಿಯಲ್ಲಿ ಮಾತ್ರ ಈ ಸಮಸ್ಯೆ ಗುರುತಿಸಲಾಗುತ್ತಿದೆ. ಈಗ ರಾಜ್ಯದಲ್ಲಿ ಅಂದಾಜು 5 ಲಕ್ಷದಷ್ಟು ಪ್ರಕರಣಗಳಿವೆ. ಮನೆಯ ಮಟ್ಟದಲ್ಲಿಯೇ ಹೆಚ್ಚಿನ ರೋಗಿಗಳು ಇರುವುದರಿಂದ ರೋಗ ನಿರ್ಣಯ ಹಾಗೂ ಚಿಕಿತ್ಸೆಗೆ ಇಲಾಖೆಗೆ ಕ್ರಮ ಕೈಗೊಂಡಿದೆ.
ಮನೆ ಬಾಗಿಲಿನಲ್ಲಿಯೇ ಆರೋಗ್ಯ ತಪಾಸಣೆ ನಡೆಸಿ, ಮಾತ್ರೆಗಳನ್ನು ವಿತರಿಸುವ ‘ಗೃಹ ಆರೋಗ್ಯ’ ಯೋಜನೆಗೆ ಅಕ್ಟೋಬರ್‌ನಲ್ಲಿ ಚಾಲನೆ ದೊರೆತಿದೆ. ಮೊದಲ ಹಂತದಲ್ಲಿ ಕೋಲಾರದಲ್ಲಿ ಯೋಜನೆ ಪ್ರಾರಂಭವಾಗಿದ್ದು, ಜನವರಿಯಲ್ಲಿ ರಾಜ್ಯದಾದ್ಯಂತ ಅನುಷ್ಠಾನ ಮಾಡಲು ಇಲಾಖೆ ಮುಂದಾಗಿದೆ. ಯೋಜನೆಯಡಿ ಪ್ರತಿ ಮನೆಗೂ ತೆರಳಿ, 30 ವರ್ಷ ಮೇಲ್ಪಟ್ಟವರಿಗೆ ತಪಾಸಣೆ ಮಾಡಲಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಒಂದು ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನೂ ನೀಡಲಾಗುತ್ತದೆ. ಈಗ ಯೋಜನೆಯಡಿ ಡಿಮೆನ್ಶಿಯಾ ಪತ್ತೆಗೂ ಆರೋಗ್ಯ ಇಲಾಖೆ ಕ್ರಮವಹಿಸಿದೆ. ಮರೆವು ಕಾಯಿಲೆಯ ಬಗ್ಗೆಯೂ ಪ್ರಶ್ನಿಸಿ, ಪ್ರಾರಂಭಿಕ ಹಂತದಲ್ಲಿಯೇ ಸಮಸ್ಯೆ ಗುರುತಿಸಲಾಗುತ್ತದೆ.
ಚಿಕಿತ್ಸೆಗೆ ವ್ಯವಸ್ಥೆ: ಸಮುದಾಯ ಆರೋಗ್ಯಾಧಿಕಾರಿ, ಪ್ರಾಥಮಿಕ ಸುರಕ್ಷಾಣಾಧಿಕಾರಿ, ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳು ಮನೆಗಳಿಗೆ ಭೇಟಿ ನೀಡಲಿವೆ. ಅವರಿಗೆ ಡಿಮೆನ್ಶಿಯಾ ಪತ್ತೆಗೆ ಸಂಬಂಧಿಸಿದಂತೆಯೂ ತರಬೇತಿ ಒದಗಿಸಲಾಗುತ್ತಿದೆ. ಈ ತಂಡವು ಮನೆಗಳಿಗೆ ಭೇಟಿ ನೀಡಿದ ವೇಳೆ ಡಿಮೆನ್ಶಿಯಾ ಕಾಯಿಲೆಗೆ ಸಂಬಂಧಿಸಿದಂತೆಯೂ ಪ್ರಶ್ನಿಸಲಿದೆ. ರೋಗ ಲಕ್ಷಣ ಇರುವವರಿಗೆ ತಾಲ್ಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗೆ ಕಳಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ.
‘ಸಾಂಕ್ರಾಮಿಕವಲ್ಲದ ರೋಗಗಳನ್ನ ಹತೋಟಿಗೆ ತರುವುದು ಯೋಜನೆಯ ಮುಖ್ಯ ಗುರಿಯಾಗಿದೆ. ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳ ಜತೆಗೆ ಮಾನಸಿಕ ಸಮಸ್ಯೆಗಳ ಪತ್ತೆಗೂ ಯೋಜನೆಯಡಿ ಆದ್ಯತೆ ನೀಡಲಾಗುತ್ತಿದೆ. ಮರೆವು ಕಾಯಿಲೆಯ ಬಗ್ಗೆಯೂ ಪ್ರಶ್ನಿಸಿ, ಸಮಸ್ಯೆ ಇರುವವರನ್ನು ಗುರುತಿಸುತ್ತೇವೆ’ ಎಂದು ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕ ಡಾ.ಜಿ. ಶ್ರೀನಿವಾಸ್ ತಿಳಿಸಿದರು.
ಮರೆವು ಕಾಯಿಲೆ ಗಂಭೀರ ಸ್ವರೂಪ ಪಡೆಯುತ್ತಿದೆ. ಆದ್ದರಿಂದ ಗೃಹ ಆರೋಗ್ಯ ಯೋಜನೆಯಡಿ ಈ ಕಾಯಿಲೆ ಪತ್ತೆ ಮಾಡಿ ಚಿಕಿತ್ಸೆಗೆ ಕ್ರಮವಹಿಸಲಾಗುವುದು
–ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಸವಾಲಾದ ರೋಗಿಗಳ ಆರೈಕೆ
ಡಿಮೆನ್ಶಿಯಾ ರೋಗಿಗಳಿಗೆ ದೀರ್ಘಾವಧಿ ಆರೈಕೆ ಅಗತ್ಯವಿದೆ. ತರಬೇತಿ ಹೊಂದಿದ ಆರೈಕೆದಾರರು ಇಲ್ಲದಿರುವುದರಿಂದ ಅವರಿಗೆ ಆರೈಕೆ ಒದಗಿಸುವುದು ಸವಾಲಾಗಿದೆ. ಡಿಮೆನ್ಶಿಯಾ ಆರೈಕೆ ಸಂಶೋಧನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಡಿಮೆನ್ಶಿಯಾ ಇಂಡಿಯಾ ಅಲಯನ್ಸ್ (ಡಿಐಎ) ಒಪ್ಪಂದ ಮಾಡಿಕೊಂಡಿವೆ. ‘ಡಿಮೆನ್ಶಿಯಾ ರೋಗಿಗಳು ಗೊಂದಲಕ್ಕೆ ಒಳಗಾಗಿರುತ್ತಾರೆ. ಅವರಿಗೆ ಕುಟುಂಬದಿಂದ ನೆರವು ಬೇಕಾಗುತ್ತದೆ. ಈ ಸಮಸ್ಯೆ ಇರುವವರಿಗೆ ಡೇ ಕೇರ್ ಸೌಲಭ್ಯವಿಲ್ಲ. ಆರೈಕೆದಾರರು ಮನೆಯ ಮಟ್ಟದಲ್ಲಿ ಸಿಗುತ್ತಿಲ್ಲ. ಈ ರೋಗಿಗಳನ್ನು ನೋಡಿಕೊಳ್ಳುವವರಿಗೆ ಯಾವುದೇ ಭತ್ಯೆಗಳೂ ಸಿಗುತ್ತಿಲ್ಲ. ರೋಗದ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕಿದೆ. ತಪಾಸಣೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಆರೈಕೆದಾರರಿಗೆ ಸೂಕ್ತ ತರಬೇತಿ ಅಗತ್ಯ’ ಎಂದು ಡಿಮೆನ್ಶಿಯಾ ಇಂಡಿಯಾ ಅಲಯನ್ಸ್ ಅಧ್ಯಕ್ಷೆ ರಾಧಾ ಎಸ್. ಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.