ADVERTISEMENT

ಆರ್‌ಟಿಇ: 17 ಮಕ್ಕಳ ಸ್ಥಿತಿ ಅತಂತ್ರ

ಏಕಾಏಕಿ ಮುಚ್ಚಿದ ಗೊಟ್ಟಿಗೆರೆ ಪ್ರದೇಶದ ಗುರುದರ್ಶನ ಪಬ್ಲಿಕ್‌ ಶಾಲೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಬಳಿ ಇರುವ ಗುರುದರ್ಶನ ಪಬ್ಲಿಕ್ ಶಾಲೆಯನ್ನು ಇದೇ ತಿಂಗಳು 20 ರಂದು ಏಕಾಏಕಿ ಮುಚ್ಚಲಾಗಿದ್ದು, ಇತ್ತ ಸರ್ಕಾರಿ ಶಾಲೆಗೆ ದಾಖಲಾಗಲು ಸಾಧ್ಯವಾಗದೇ, ಅತ್ತ ಇಂಗ್ಲಿಷ್‌ ಶಾಲೆಗಳಲ್ಲಿ ಹಣ ಕಟ್ಟಲೂ ಆಗದೇ 17 ಮಕ್ಕಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಈ ಎಲ್ಲ ಮಕ್ಕಳು ಆರ್‌ಟಿಇ ಅಡಿಯಲ್ಲಿ ದಾಖಲಾಗಿದ್ದರು.

ಸಿಬಿಎಸ್‌ಇ ಪಠ್ಯಕ್ರಮದ ಈ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಈ ವರ್ಷ ಒಟ್ಟು 56 ಮಕ್ಕಳು ಓದುತ್ತಿದ್ದರು. ಇದರಲ್ಲಿ 17 ಮಕ್ಕಳನ್ನು ಆರ್‌ಟಿಇ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗಿತ್ತು. ‘ಶಾಲೆಯ ಕಾರ್ಯದರ್ಶಿ ಅಪಘಾತಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಮುಂದುವರಿಸಲು ಸಾಧ್ಯವಿಲ್ಲ’ ಎಂಬ ಕಾರಣ ನೀಡಿ ಮುಚ್ಚಲಾಗಿದೆ. ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಲಾಗಿದೆ. ‘ಈಗ ಶಾಲೆ ಮುಚ್ಚಿದರೆ ಮಕ್ಕಳ ಗತಿಯೇನು’ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ADVERTISEMENT

‘ನನ್ನ ಮಗ ನಿಖಿಲ್‌, ಮೂರು ವರ್ಷದಿಂದ ಈ ಶಾಲೆಯಲ್ಲಿ ಓದುತ್ತಿದ್ದಾನೆ. ನಾನು ಕೂಲಿ ಮಾಡಿ ಅವನ ವಿದ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ಎರಡು ವರ್ಷದಿಂದ ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದವು. ಈಗ ಏಕಾಏಕಿ ಮುಚ್ಚಿದ್ದಾರೆ. ಉಳಿದವರು ದುಡ್ಡು ಕೊಟ್ಟು ಬೇರೆ ಶಾಲೆಗೆ ಸೇರಿಸಿದ್ದಾರೆ. ಆದರೆ, ನಮ್ಮ ಗತಿ ಏನು? ಹತ್ತು ದಿನಗಳಿಂದ ಕೆಲಸ ಬಿಟ್ಟು ಮಕ್ಕಳ ಸಮಸ್ಯೆ ಹಿಂದೆ ಬಿದ್ದಿದ್ದೇವೆ’ ಎಂದು ಪೋಷಕ ಥಾಮಸ್‌ ಅಳಲು ತೋಡಿಕೊಂಡರು.

‘ಶಿಕ್ಷಣ ಇಲಾಖೆಯವರು ಸರ್ಕಾರಿ ಶಾಲೆಯಲ್ಲಿ ಸೀಟು ಕೊಡುವುದಾಗಿ ಹೇಳುತ್ತಿದ್ದಾರೆ. ಇಷ್ಟು ದಿನ ಇಂಗ್ಲಿಷ್‌ ಶಾಲೆಯಲ್ಲಿ ಓದಿದ ಮಕ್ಕಳು ಈಗ ಒಮ್ಮೆಲೇ ಕನ್ನಡ ಪಠ್ಯವನ್ನು ಕಲಿಯಲು ಸಾಧ್ಯವೇ? ನಾವು ವಿದ್ಯೆ ಕಲಿಯಲಿಲ್ಲ. ನಮ್ಮ ಮಕ್ಕಳಾದರೂ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಕನಸು ಕಟ್ಟಿದ್ದೆವು. ಈಗ ಎಲ್ಲವೂ ಹಾಳಾಗಿದೆ’ ಎಂದು ಪೋಷಕ ಬೈರಾಜು ಕಷ್ಟ ತೋಡಿಕೊಂಡರು.

‘ಬೇರೆ ಶಾಲೆಗಳಲ್ಲಿ ₹40 ಸಾವಿರದಿಂದ ₹50 ಸಾವಿರ ಕೇಳುತ್ತಿದ್ದಾರೆ. ಅಷ್ಟು ಹಣ ಕೊಡುವ ಶಕ್ತಿ ನಮಗಿಲ್ಲ. ನಾನು ಚಾಲಕನ ಕೆಲಸ ಮಾಡುತ್ತಿದ್ದರೂ ಸ್ವಾಭಿಮಾನದಿಂದ ಬದುಕಿದ್ದೇನೆ. ಈಗ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ನಮಗೆ ಇಷ್ಟ ಇಲ್ಲ. ನಮ್ಮ ಮಕ್ಕಳನ್ನು ಆರ್‌ಟಿಐ ಅಡಿಯಲ್ಲಿಯೇ ಇಂಗ್ಲಿಷ್‌ ಶಾಲೆಯಲ್ಲಿ ದಾಖಲು ಮಾಡಿಸಬೇಕು’ ಎಂದು ಶ್ರೀನಿವಾಸ್‌ ಒತ್ತಾಯಿಸಿದರು.

ಕಾನೂನಿನಲ್ಲಿ ಅವಕಾಶ ಇಲ್ಲ

‘ಶಾಲೆಯನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮುಚ್ಚಿದ್ದಾರೆ. ಆರ್‌ಟಿಇ ಅಡಿಯಲ್ಲಿ ಅವಕಾಶ ಪಡೆದ ಮಕ್ಕಳ ಪೋಷಕರು ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೇ ವರ್ಗಾವಣೆ ಕೊಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಆದರೆ, ಆರ್‌ಟಿಇ ನಿಯಮದ(1)(3) ಅಡಿಯಲ್ಲಿ ವರ್ಗಾವಣೆಗೆ ಅವಕಾಶ ಇಲ್ಲ. ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ಸೇರಿಸಲು ಮಾತ್ರ ಅವಕಾಶ ಇದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್‌ ಅಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.